ನರಗುಂದ, ರೋಣ ತಾಲೂಕಿನಲ್ಲಿ ವಿಪತ್ತು ನಿರ್ವಹಣೆ ಸಮಿತಿ ಸ್ಥಾಪನೆ

4 NRD-4- vippattu unit
Published on

ನರಗುಂದ: ಕೋವಿಡ್ ಸಮಯದಲ್ಲಿ ಅನೇಕ ಸಮಾಜಮುಖಿ ಕೆಲಸ ಮಾಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ವಸ್ಥ ಸಮಾಜ ನಿರ್ವಣಕ್ಕೆ ಮುನ್ನುಡಿ ಬರೆದಿದೆ. ನರಗುಂದ ಮತ್ತು ರೋಣ ತಾಲೂಕಿನಲ್ಲಿ ವಿಪತ್ತು ನಿರ್ವಹಣೆ ಸಮಿತಿ ಸ್ಥಾಪಿಸಿರುವುದು ಹೆಮ್ಮೆಯ ಕಾರ್ಯ ಎಂದು ಉಪ ತಹಸೀಲ್ದಾರ್ ಐ.ಟಿ. ಜಂತ್ಲಿ ಹೇಳಿದರು.


ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ತಂಗಡಿಯ ಜನಜಾಗೃತಿ ವೇದಿಕೆ, ಪೊಲೀಸ್, ಕಂದಾಯ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ತಾಲೂಕಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ನರಗುಂದ ಮತ್ತು ರೋಣ ತಾಲೂಕಿನ 81, 82ನೇ ವಿಪತ್ತು ನಿರ್ವಹಣೆ ಸಮಿತಿ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.


ಬೆಳ್ತಂಗಡಿಯ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಸ್ ಮಾತನಾಡಿ, ನರಗುಂದ, ರೋಣ ತಾಲೂಕಿನಲ್ಲಿ ಆಗಾಗ ಪ್ರವಾಹ ಸಂಭವಿಸುತ್ತದೆ. ಈ ಬಗ್ಗೆ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸ್ಥಳೀಯರಿಗೆ ಆಪದ್ಭಾಂಧವರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.


ಕಲ್ಯಾಣ ಕರ್ನಾಟಕದ ಪ್ರಾದೇಶಿಕ ನಿರ್ದೇಶಕ ಗಣೇಶ ಬಿ. ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರ ಆಶಯದಂತೆ ವಿಪತ್ತು ನಿರ್ವಹಣೆ ಸಮಿತಿಯನ್ನು ಅನುಷ್ಠಾನಗೊಳಿಸಲಾಗಿದೆ. ವಿಪತ್ತು ನಿರ್ವಹಣೆಯ ಶೌರ್ಯ ತಂಡವು ಸಾಮಾಜಿಕ ಕಾರ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರ ಜತೆಗೆ ಸಾರ್ವಜನಿಕರಿಗೆ ಸ್ವಯಂ ಸಂರಕ್ಷಣೆ ತರಬೇತಿ ನೀಡುತ್ತದೆ ಎಂದು ತಿಳಿಸಿದರು.


ಜಿಪಂ ಮಾಜಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಎಚ್.ಬಿ. ಅಸೂಟಿ, ಪರಶುರಾಮ ಲಮಾಣಿ, ಯೋಗೇಶ ಎ, ಜಗದೀಶ ಬಿ, ಪಾಂಡುರಂಗ ಪತ್ತಾರ, ಜಯವಂತ ಪಟಾಗರ್, ನಾಗೇಶ ಕೊಪ್ಪಳ, ಮಹಾಬಲೇಶ ಪಟಗಾರ, ಅವಿನಾಶ್, ಸಂಘದ ವಲಯ ಹಾಗೂ ಕೃಷಿ ಮೇಲ್ವಿಚಾರಕರು, ಆಂತರಿಕ ಲೆಕ್ಕ ಪರಿಶೋಧಕರು, ಸೇವಾ ಪ್ರತಿನಿಧಿಗಳು, 250 ಸ್ವಯಂ ಸೇವಕರು ಉಪಸ್ಥಿತರಿದ್ದರು. ನರಗುಂದ ಅಗ್ನಿಶಾಮಕ ಠಾಣೆ ಸಿಬ್ಬಂದಿಯಿಂದ ವಿಪತ್ತು ನಿರ್ವಹಣೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net