

ಅಂಕೋಲಾ: ತಾಲೂಕಿನ ಅಚವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋತಿ ಗುಡ್ಡ ಗ್ರಾಮದಲ್ಲಿ ಚಿತ್ರದುರ್ಗ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶಾಖಾ ಮಠದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಶುಕ್ರವಾರ ಶಂಕು ಸ್ಥಾಪನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಇಲ್ಲಿಯ ಪರಿಸರ ಪ್ರಕೃತಿಯ ಸಂರಕ್ಷಣೆ, ಸರ್ವ ಧರ್ಮ ಸಮ್ಮಿಲನ ಮತ್ತು ಈ ಭಾಗದ ಸರ್ವತೋಮುಖ ಮೂಲಸೌಕರ್ಯಗಳ ಅಭಿವೃದ್ಧಿಯೇ ನಮ್ಮ ಮಠದ ಉದ್ದೇಶ. ಸುತ್ತಮುತ್ತಲಿನ ಎಲ್ಲ ಸಮಾಜದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದರು.
ಮಠದ ಸ್ಥಾಪನೆಗೆ ಪ್ರಮುಖರಾದ ರಾಮಚಂದ್ರ ಹೆಗಡೆ ಮಾತನಾಡಿ, ಶ್ರೀಗಳು ಈ ಭಾಗದಲ್ಲಿ ಜಮೀನು ತೆಗೆದುಕೊಂಡು ಮಠದ ಶಾಖೆ ಸ್ಥಾಪಿಸಿ, ಸೇವೆಗೆ ಮುಂದಾಗಿರುವುದು ನಮ್ಮೆಲ್ಲರ ಪುಣ್ಯ ಎಂದರು.
ಭಾಸ್ಕರ ಹೆಗಡೆ, ಬಾಲಚಂದ್ರ ಶೆಟ್ಟಿ, ಎಂ.ಎನ್. ಭಟ್, ಗಿರೀಶ ಭಟ್, ವಾಸುದೇವ ಭಟ್, ಪರಮೇಶ್ವರ ಭಟ್, ಮಾಚ ಭಟ್, ಯಂಕ್ ಭಟ್, ಗಣರಾಜ ಶಂಕರಲಿಂಗ, ರಾಮಚಂದ್ರ ಭಟ್ ಇತರರು ಉಪಸ್ಥಿತರಿದ್ದರು.