

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 155ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ‘ಬಾಪೂಜಿ ಪ್ರಬಂಧ ಸ್ಪರ್ಧೆ’ ಹಮ್ಮಿಕೊಂಡಿದೆ. ವಿವಿಧ ವಿಷಯಗಳ ಕುರಿತು ಪ್ರೌಢಶಾಲೆ, ಪದವಿಪೂರ್ವ ಶಿಕ್ಷಣ ಹಾಗೂ ಪದವಿ- ಸ್ನಾತಕೋತ್ತರ ಪದವಿಗಳ ಮೂರು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ಇರಲಿದೆ.
ಪ್ರಥಮ ಬಹುಮಾನವಾಗಿ 3 ಸಾವಿರ ರೂ., 2 ಸಾವಿರ ರೂ.- ದ್ವಿತೀಯ ಹಾಗೂ ಸಾವಿರ ರೂ. ನಗದು ಉಳ್ಳ ತೃತೀಯ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ಅ. 2ರಂದು ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಅತ್ಯುತ್ತಮ ಪ್ರಬಂಧಗಳನ್ನು ಮೂರೂ ವಿಭಾಗಗಳಲ್ಲಿ ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಿಕೊಡಲಾಗುವುದು. ಪ್ರೌಢ ಶಾಲಾ ವಿಭಾಗದಲ್ಲಿ ‘ಮಹಾತ್ಮ ಗಾಂಧಿ ಹಾಗೂ ಪ್ರಜಾಪ್ರಭುತ್ವ’, ‘ಗಾಂಧೀಜಿ ವಿಚಾರದಲ್ಲಿ ಸತ್ಯಾಗ್ರಹ’, ‘ನನ್ನ ಬದುಕಿನಲ್ಲಿ ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ’, ‘ಗಾಂಧಿ ತತ್ವಗಳಿಂದ ದೇಶ ಕಟ್ಟುವ ಬಗೆ’- ಇವುಗಳಲ್ಲಿ ಒಂದು ವಿಷಯ ಆಯ್ಕೆ ಮಾಡಿಕೊಂಡು 900 ಪದಗಳಿಗೆ ಮೀರದಂತೆ ಪ್ರಬಂಧ ರಚಿಸಬೇಕು. ಸೆ. 10 ರೊಳಗೆ ತಮ್ಮ ಶಾಲಾ- ಕಾಲೇಜುಗಳಲ್ಲಿ ನಡೆಸಲಾಗುವ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ವಿವರಗಳಿಗೆ ಶಾಲಾ ಮುಖ್ಯಸ್ಥರನ್ನು ಸಂಪರ್ಕಿಸಬಹುದು.