

ತಿಪಟೂರು: ಗೋವಿನ ಶಾಪದಿಂದಲೇ ಸರ್ಕಾರ ಹಾಗೂ ಚಾಮುಂಡೇಶ್ವರಿ ಕ್ಷೇತ್ರ ಎರಡನ್ನೂ ಸಿದ್ದರಾಮಯ್ಯ ಕಳೆದುಕೊಂಡರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು.
ಕೆ.ಬಿ.ಕ್ರಾಸ್ ಬಳಿ ಗುರುವಾರ ಬಿಜೆಪಿ ಆಯೋಜಿಸಿದ್ದ ಗ್ರಾಮಸ್ವರಾಜ್ ಸಮಾವೇಶದಲ್ಲಿ ಭಾಗಿಯಾದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕುರುಬ ಜನಾಂಗಕ್ಕೆ ಎಸ್ಟಿ ಮೀಸಲು ಪಡೆಯುವ ಹೋರಾಟ ಕಾಗಿನೆಲೆ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಿದೆ. ಇದರ ಹಿಂದೆ ಆರ್‌ಎಸ್‌ಎಸ್ ಇದೆ ಎಂಬುದು ಅಪ್ಪಟ ಸುಳ್ಳು. ಸಿದ್ದರಾಮಯ್ಯಗೆ ಆರ್‌ಎಸ್‌ಎಸ್ ಪದ ಬಳಸುವ ಯೋಗ್ಯತೆ ಇಲ್ಲ ಎಂದರು.
ನಾನೆಂದಿಗೂ ಕುರುಬರ ನಾಯಕ ಎಂದು ಹೇಳಿಕೊಂಡಿಲ್ಲ. ನಾನೊಬ್ಬ ಹಿಂದುತ್ವದ ಪ್ರತಿಪಾದಕ ಮಾತ್ರ. ಎಲ್ಲದಕ್ಕೂ ನಾನು ಲೀಡರ್ ಎಂದು ಹೇಳಿಕೊಂಡ ಸಿದ್ದರಾಮಯ್ಯ ಸರ್ಕಾರ ಹಾಗೂ ಚಾಮುಂಡೇಶ್ವರಿ ಎರಡನ್ನೂ ಕಳೆದುಕೊಂಡರು ಎಂದರು.
ಗೋಹತ್ಯೆ ವಿಚಾರದಲ್ಲಿ ಮುಸಲ್ಮಾನರನ್ನು ಓಲೈಸುವ ಬದಲು, ಚುನಾವಣಾ ಪ್ರಾಣಾಳಿಕೆಯಲ್ಲಿ ಗೋಹತ್ಯೆ ನಿಷೇಧ ತೆರವುಗೊಳಿಸುತ್ತೇವೆ ಎಂದು ಸೇರಿಸಿ, ಗ್ರಾಪಂ ಚುನಾವಣೆಗಳಲ್ಲಿ ಗೆದ್ದು ಬರಲಿ. ಸಿದ್ದರಾಮಯ್ಯಗೆ ಯಾವಾಗ, ಯಾವ ರೀತಿ ಹೇಳಿಕೆ ಕೊಡುತ್ತೇನೆ ಎಂಬ ಕಲ್ಪನೆಯೇ ಇರಲ್ಲ. ಗೋವಿನ ಶಾಪದಿಂದಲೇ ಸಿದ್ದರಾಮಯ್ಯ ಅವರು ಸರ್ಕಾರ ಕಳೆದುಕೊಂಡರು ಎಂದು ಈಶ್ವರಪ್ಪ ಮಾತಿನಲ್ಲೇ ತಿವಿದರು.