ಸಮಾನತೆ ಸಹಬಾಳ್ವೆಗಾಗಿ ಶಾಂತಿಯುತ ಹೋರಾಟ

WEB1234
Published on

ಸಚಿವ ಕೆ.ಎಚ್.ಮುನಿಯಪ್ಪ ಹೇಳಿಕೆ ಕರ್ನಾಟಕ ಆದಿಜಾಂಬವ ಸೇವಾಸಂಘ ಉದ್ಘಾಟನೆ

ಶಿಡ್ಲಘಟ್ಟ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹೇಳಿರುವಂತೆ ಸಮಾನತೆ, ಸಹಬಾಳ್ವೆ ಸಿಗುವವರೆಗೂ ಹೋರಾಟ ನಿಲ್ಲಬಾರದು. ಆದರೆ, ಹೋರಾಟ ಶಾಂತಿಯುತವಾಗಿ ಸಾಗಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ತಾಲೂಕಿನ ಎಚ್.ಕ್ರಾಸ್‌ನ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಆದಿಜಾಂಬವ ಸೇವಾ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಸಮಾನತೆಯ ಬದುಕು, ಸಹಬಾಳ್ವೆ ಸಿಗಲು ನಾವೆಲ್ಲರೂ ಶಿಕ್ಷಣವಂತರಾಗಬೇಕು. ಶೋಷಿತರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಅದಕ್ಕಾಗಿಯೇ ಸರ್ಕಾರ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಅಂಬೇಡ್ಕರ್, ವಾಲ್ಮೀಕಿ ಕುಟೀರದಂತಹ ವಸತಿ ಶಾಲೆ ಆರಂಭಿಸಿ ಶೋಷಿತರು, ಸಮಾಜದಲ್ಲಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಉಚಿತ ಶಿಕ್ಷಣ ವಸತಿ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಂಡಿದೆ ಎಂದರು.

ಅಂಬೇಡ್ಕರ್ ನೀಡಿದ ಸಂವಿಧಾನದಿಂದಾಗಿ ನಾವು ಇಂದು ಎಲ್ಲರಂತೆ ಸಹಬಾಳ್ವೆ ಮಾಡಲು ಸಾಧ್ಯವಾಗಿದೆ. ಹಾಗಾಗಿ ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗಬೇಕು. ಸಂವಿಧಾನದಲ್ಲಿನ ಎಲ್ಲ ಹಕ್ಕುಗಳನ್ನು ಪಡೆಯಲು ಹೋರಾಟ ಮುಖ್ಯ. ಆದರೆ ಆ ಹೋರಾಟ ಯಾರ ವಿರುದ್ಧವೂ ಆಗಿರಬಾರದು, ಕೇವಲ ನಮ್ಮ ಹಕ್ಕು, ಸಮಾನತೆಯ ಸಹಬಾಳ್ವೆಗಾಗಿ ಆಗಿರಬೇಕು ಎಂದು ಆಶಿಸಿದರು.

ಕಡಪದ ಆದಿಜಾಂಬವ ಮಠದ ಶ್ರೀ ಆನಂದಮುನಿ ಸ್ವಾಮೀಜಿ ಆಶೀರ್ವಚನ ನೀಡಿ, ಆದಿಜಾಂಬವನು ಶ್ರೀರಾಮನಿಂದ ಪೂಜಿಸಲ್ಪಟ್ಟ ಶ್ರೇಷ್ಠ. ಅವರ ಸಮುದಾಯದವರಾದ ನಾವು ಕೂಡ ಶ್ರೇಷ್ಠರಾಗಿದ್ದು ನಮ್ಮೆಲ್ಲರ ಬದುಕು ಮಾದರಿ ಆಗಿರಬೇಕು. ವಾಲ್ಮೀಕಿ ರಾಮಾಯಣದಲ್ಲಿ ಆದಿಜಾಂಬವನ ಮಹಾತ್ಮೆ ಬಗ್ಗೆ ಉಲ್ಲೇಖವಿದ್ದು, ಎಲ್ಲರೂ ತಿಳಿದುಕೊಳ್ಳಬೇಕು. ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ನುಡಿದರು.

ಪದ್ಮಶ್ರೀ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಹಿರಿಯ ಹೋರಾಟಗಾರ ಅಜ್ಜಪ್ಪ, ಡಿಕೆಡಿ ವಿಜೇತ ನೃತ್ಯಪಟು ಶಶಾಂಕ್, ಬುರ‌್ರಕಥೆ ವಿದ್ವಾಂಸ ಕೈವಾರದ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು.

ಆದಿ ಜಾಂಬವ ಸೇವಾ ಸಂಘದ ಅಧ್ಯಕ್ಷ ಕೆ.ಎಂ.ನರಸಿಂಹಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್‌ಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಭೀಮೇಶ್, ದಸಂಸ ಮುಖಂಡರಾದ ಗಂಗಾಧರಪ್ಪ, ಮಾದಿಗ ದಂಡೋರದ ದೇವರಾಜ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net