

* ಹರೀಸಂದ್ರದ ಬಳಿ ಕಸ ಸಂಸ್ಕರಣಾ ಕೇಂದಕ್ಕೆ ಭಾರಿ ವಿರೋಧ
* ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ
ರಾಮನಗರ
ಕಸ ವಿಲೇವಾರಿ ಘಟಕ ನಿರ್ಮಾಣ ವಿರೋಧಿಸುತ್ತಲೇ ಬಂದಿದ್ದ ತಾಲೂಕಿನ ಕಸಬಾ ಹೋಬಳಿ ಹರೀಸಂದ್ರ ಮತ್ತು ಸುತ್ತ ಮುತ್ತಲ ಗ್ರಾಮಸ್ಥರು ಗುರುವಾರದಿಂದ ಅರ್ನಿದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಹರೀಸಂದ್ರ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ವಿರೋಧಿಸಿ ಚಿಕ್ಕೇಗೌಡನದೊಡ್ಡಿಯ ಆಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುತ್ತಿರುವ ಜಾಗದವರೆಗೂ ಸಾಗಿತು.
ಹರೀಸಂದ್ರ, ಚಿಕ್ಕೇಗೌಡನ ದೊಡ್ಡಿ, ಕಾಳೇಗೌಡನದೊಡ್ಡಿ, ಪಾದರಹಳ್ಳಿ, ಬೆಜ್ಜರಹಳ್ಳಿಕಟ್ಟೆ, ಮಾರೇಗೌಡನದೊಡ್ಡಿ, ಹನುಮಂತೇಗೌಡನ ದೊಡ್ಡಿ, ಕೆಂಪೇಗೌಡನದೊಡ್ಡಿ, ಮದರ್ ಸಾಬರದೊಡ್ಡಿ, ಆಲೆಮರದದೊಡ್ಡಿ ಸೇರಿ ಸುತ್ತಮುತ್ತಲ ಹಳ್ಳಿಗಳ ನೂರಾರು ಗ್ರಾಮಸ್ಥರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಆಂಜನೇಯಸ್ವಾಮಿ ದೇವಾಲಯದ ಬಳಿ ಪ್ರಾರಂಭಗೊಂಡ ಮೆರವಣಿಗೆ ಹರೀಸಂದ್ರ ಗ್ರಾಮ ಪಂಚಾಯಿತಿ ಕಚೇರಿ ಎದುರು ಆಗಮಿಸಿದಾಗ ಪ್ರತಿಭಟನಾಕಾರರು ವಾಹನಗಳನ್ನು ತಡೆದು ನಿಲ್ಲಿಸಿ ಜಿಲ್ಲಾಡಳಿತ ,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ರಸ್ತೆಯಲ್ಲಿ ಸುಮಾರು ಒಂದು ಗಂಟೆಗಳಿಗೂ ಹೆಚ್ಚು ಕಾಲ ಸಂಚಾರ ಸಿಕ್ಕು ಉಂಟಾಗಿ ಸವಾರರು ಪರದಾಡಿದರು.
ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ಇಲ್ಲಿ ಸುತ್ತಮುತ್ತಲ 8 ಕಿಮಿ ಪ್ರದೇಶದಲ್ಲಿ ಯಾವುದೇ ಜನವಸತಿ ಪ್ರದೇಶ ಇಲ್ಲ ಎನ್ನುವ ವರದಿ ನೀಡಿದೆ. ಅಷ್ಟೇ ಅಲ್ಲದೆ ರೈತರನ್ನು ಕರೆದು ಮಾತನಾಡುವ ಕನಿಷ್ಠ ಸೌಜನ್ಯವನ್ನೂ ತೋರಿಲ್ಲ. ಈಗಾಗಲೇ ಈ ಸಂಬಂಧ ವಕೀಲರೊಂದಿಗೆ ಮಾತನಾಡುತ್ತಿದ್ದು, ಶೀಘ್ರವೇ ಕಾನೂನು ಹೋರಾಟ ನಡೆಸಲಾಗುವುದು ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಈ ವೇಳೆ ಮಾಜಿ ಶಾಸಕ ಎ.ಮಂಜುನಾಥ್, ಮುಖಂಡ ಪಾದರಹಳ್ಳಿ ಚಂದ್ರಶೇಖರ್, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಮಾತನಾಡಿದರು. ಧರಣಿಯಲ್ಲಿ ಬಿಜೆಪಿ ಯುವ ಮುಖಂಡ ವರದರಾಜುಗೌಡ, ಜೆಡಿಎಸ್ ಮುಖಂಡ ಬಿ.ಉಮೇಶ್, ಕೆ.ಚಂದ್ರಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್, ರಾಮು, ಬಸವನಪುರ ಪ್ರಕಾಶ್, ಮುಖಂಡರಾದ ರಾಮಕಷ್ಣಯ್ಯ, ಮಳವಳ್ಳಿ ರಾಜು, ರಾಜಣ್ಣ, ಕೃಷ್ಣಯ್ಯ, ಸಂತೋಷ್, ಬಾಬಣ್ಣ, ರಾಮು, ಅಶ್ವಥ್, ಕೃಷ್ಣಮೂರ್ತಿ, ಕೃಷ್ಣೇಗೌಡ, ಮಹೇಶ್, ಬೋರೇಗೌಡ, ಮೋಹನ್, ಚರಣ್, ಶಾಂತಣ್ಣ, ಚಂದ್ರು, ರಾಜೀವ್ ಗೌಡ, ಮಹದೇವ್, ಜಯಕುಮಾರ್ ಮತ್ತಿತರರು ಇದ್ದರು.