

* ನಗರಸಭೆ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ
* ಅರ್ಕಾವತಿ ನದಿ ದಂಡೆಯಲ್ಲಿ ರಾರಾಜಿಸುತ್ತಿರುವ ಬರಹ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ನೂತನ ಪ್ರಯೋಗಗಳ ಮೂಲಕ ಸುಂದರ ಸ್ವಚ್ಛ ನಗರವನ್ನಾಗಿಸುವ ನಿಟ್ಟಿನಲ್ಲಿ ಬರಹದ ಮೂಲಕ ಜನರಲ್ಲಿ ಪರಿಸರ ಜಾಗೃತಿ, ಸುಂದರ ನಗರದ ಪರಿಕಲ್ಪನೆಯ ಅರಿವು ಮೂಡಿಸುವ ವಿನೂತನ ಪ್ರಯೋಗಕ್ಕೆ ರಾಮನಗರ ನಗರಸಭೆ ಮುಂದಾಗಿದ್ದು ಸಾರ್ವಜನಿಕರಿಂದ ಉತ್ತಮ ಪ್ರಶಂಸೆಯೂ ವ್ಯಕ್ತವಾಗಿದೆ.
ರಾಮನಗರದ ಅರ್ಕಾವತಿ ನದಿ ಸೇತುವೆ ಮೇಲೆ ಅಳವಡಿಸಿರುವ ಕಬ್ಬಿಣದ ಗ್ರಿಲ್ ಜಾಲರಿ ಮೇಲೆ ಬರಹ ಫಲಕಗಳ ಮುಖಾಂತರ ಸ್ವಚ್ಛತೆ, ಪ್ಲಾಸ್ಟಿಕ್ ದುಷ್ಪರಿಣಾಮ, ಜಲಮೂಲ ರಕ್ಷಣೆ, ಹಸಿರು, ಹಸಿ, ಒಣಕಸ ವಿಂಗಡನೆ ಬಗ್ಗೆ ಬರಹದ ರೂಪದಲ್ಲಿ ಜನರಿಗೆ ಮಾಹಿತಿ ನೀಡಲು ಹೆಜ್ಜೆ ಇಟ್ಟಿದೆ. ಹಂತ-ಹಂತವಾಗಿ ಸಾರ್ವಜನಿಕ ಸ್ಥಳ, ಅರ್ಕಾವತಿ ನದಿ ಮತ್ತೊಂದು ಭಾಗ, ಹುಣಸನಹಳ್ಳಿ ನೈಸ್ ರಸ್ತೆ ರಾಜಕಾಲುವೆ ಬಳಿ ಅಳವಡಿಸಿರುವ ಗ್ರಿಲ್ ಜಾಗ, ಬಸ್ ನಿಲ್ದಾಣ ಇತ್ಯಾದಿ ಸ್ಥಳಗಳಲ್ಲಿ ಇಂತಹ ಬರಹಗಳ ಮೂಲಕ ಜನರಲ್ಲಿ ಸ್ವಚ್ಛತೆ ಬಗ್ಗೆ ಚಿಂತನೆ ಮೂಡಿಸಲು ನಗರಸಭೆ ಸಜ್ಜಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ನಗರದ ಪ್ರಮುಖ ಸ್ಥಳಗಳು ಕಸದ ಗುಡ್ಡೆಗಳಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ್ದವು. ಹೊಸ ಪ್ರಯತ್ನದ ಮೂಲಕ ನಗರದ ಪ್ರಮುಖ 29 ಸ್ಥಳದಲ್ಲಿ ಕಸ ಸ್ವಚ್ಛ ಮಾಡಿ ಸ್ಥಳದಲ್ಲಿ ರಂಗೋಲಿ ಬಿಟ್ಟು ಅರಿವು ಮೂಡಿಸಿ ಸಿಸಿ ಕ್ಯಾಮರಾ ಅಳವಡಿಸಿ ವಿನೂತನ ವಿಧಾನದಿಂದ ಕಸದ ಗುಡ್ಡೆಗಳು ಮಾಯವಾಗಿ ಸ್ವಚ್ಛತೆ ಕಂಡಿವೆ.
ಎರಡನೇ ಹಂತದಲ್ಲಿ ಸ್ವಚ್ಛತೆಗೆ ಮುಂದಾಗಿರುವ ನಗರಸಭೆ ಮತ್ತೆ ನಗರದ ವಿವಿಧೆಡೆ 24 ಸ್ಥಳಗಳಲ್ಲಿ ಕಸ ಹಾಕುವ ಜಾಗ ಗುರುತಿಸಿದ್ದು, ಅಲ್ಲೂ ರಂಗೋಲಿ ಬಿಟ್ಟು ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ, ಸಿಸಿ ಕ್ಯಾಮರಾ ಅಳವಡಿಸಲಾಗುತ್ತದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.
ನಗರದ ಹೃದಯಭಾಗದಲ್ಲಿ ಅರ್ಕಾವತಿ ನದಿ ಹರಿಯುವ ಕಾರಣ ಐಜೂರು ಬಸ್ ನಿಲ್ದಾಣದಿಂದ ರೈಲು ನಿಲ್ದಾಣ ಮತ್ತಿತರ ವಾರ್ಡ್‌ಗಳಿಗೆ ಪ್ರಮುಖ ಸಂಪರ್ಕ ಸೇತುವೆ ಇದಾಗಿದೆ. ಪ್ರತಿ ಕ್ಷಣ ಜನನಿಬಿಡ ರಸ್ತೆಯಾಗಿದೆ. ಈ ಹಿಂದೆ ನದಿಗೆ ಕಸ ಕಡ್ಡಿ ಎಸೆಯಲಾಗುತ್ತಿತ್ತು. ಅದನ್ನು ನಗರಸಭೆ ಜಾಲರಿ ಹಾಕಿ ತಡೆಗಟ್ಟಿದೆ. ಅಂತಹ ಜಾಲರಿ ಮೇಲೆ ಬರಹಗಳ ಮುಖಾಂತರ ಜನರಲ್ಲಿ ನೀರು, ಗಾಳಿ, ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮ, ನದಿ ಸ್ವಚ್ಛತೆ ಬಗ್ಗೆ ಸುಂದರ ನಗರ ಪರಿಕಲ್ಪನೆ ಬಗ್ಗೆ ಜಾಗೃತಿ ಮೂಡಿಸುವ ಬರಹ ಬರೆಯಲಾಗಿದೆ. ಸೇತುವೆ ಮೇಲೆ ಹೋಗುವ ಜನರು, ಪ್ರಮುಖವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬರಹಗಳನ್ನು ಓದಿ ಹೋಗುವ ಕಾರಣದಿಂದ ಸ್ವಚ್ಛತೆಯೆಡೆಗೆ ಸಮಾಜ ಸಾಗಲು ಪರಿಣಾಮಕಾರಿಯಾಗಿ ಸಹಕಾರಿಯಾಗುತ್ತದೆ ಎಂಬುದು ನಗರಸಭೆಯ ಚಿಂತನೆ.