ಪ್ರಾಕೃತಿಕ ವಿಕೋಪಕ್ಕೆ ಪರಿಸರ ಕಲುಷಿತವೇ ಕಾರಣ

HUN-APR-18-2(MAHILA COLLEGE PROGRAMME)
Published on

ಹುಣಸೂರು: ಮನುಷ್ಯ ಪ್ರಕೃತಿಯಲ್ಲಿನ ಒಂದು ಜೀವಿಯೇ ಹೊರತು ಪ್ರತ್ಯೇಕನಲ್ಲ ಎನ್ನುವುದನ್ನು ನಾವೆಲ್ಲರೂ ಅರಿತು ಬಾಳಬೇಕಿದೆ ಎಂದು ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಅಭಿಪ್ರಾಯಪಟ್ಟರು.


ನಗರದ ಸರ್ಕಾರಿ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಗುರುವಾರ ಆಯೋಜಿಸಿದ್ದ ಪುಸ್ತಕ ಓದು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇರೋದು ಒಂದೇ ಭೂಮಿ. ಎಲ್ಲ ಜೀವಿಗಳು ಇದ್ದರೆ ಮಾತ್ರ ಮನುಷ್ಯ ಇರುತ್ತಾನೆ. ಪಕ್ಷಿಗಳು ಹೀಗೆ ಕಣ್ಮರೆಯಾಗುತ್ತಿದ್ದರೆ ಕೊನೆಗೆ ಮನುಷ್ಯನೂ ಇರಲಾರ. ಇಡೀ ವಿಶ್ವದಲ್ಲಿ ನಾವು ಅಣು ಮಾತ್ರ ಅಷ್ಟೇ. ಜೀವಿಗಳು ಭೂ ಮಂಡಲದಲ್ಲಿ ಹುಟ್ಟು ಪಡೆದು ಶತಮಾನಗಳು ಕಳೆದಿದ್ದು, ಆದಿ ಅಂತ್ಯದಲ್ಲಿ ಹಲವು ಬದಲಾವಣೆ ಎದುರಾಗಿದೆ. ಆದಿಯಲ್ಲಿ ಪರಿಸರ ಸಮತೋಲನದಿಂದ ಪ್ರಾಕೃತಿವಾಗಿ ಎಲ್ಲವೂ ಸರಿಯಾಗಿ ನಡೆಯುತ್ತಿತ್ತು, ಪರಿಸರ ಕಲುಷಿಗೊಂಡು ಪ್ರಕೃತಿ ವಿಕೋಪ ಅಲ್ಲಲ್ಲಿ ಸಂಭವಿಸುತ್ತಿದೆ ಎಂದರು.


ಲಕ್ಷ್ಮಣತೀರ್ಥ ಉಳಿಸಬೇಕಿದೆ:
ಮನುಷ್ಯ ಸೃಷ್ಟಿಸಿರುವ ಅವಾಂತರಗಳಿಗೆ ನಿಮ್ಮ ಮನೆ ಬಾಗಿಲಿನಲ್ಲೇ ಹಾದು ಹೋಗುವ ಲಕ್ಷ್ಮಣತೀರ್ಥವೇ ಜ್ವಲಂತ ಉದಾಹರಣೆಯಾಗಿದೆ. ಸಾವಿರಾರು ಜಲಚರಗಳಿಗೆ ಮತ್ತು ರೈತಾಪಿ ವರ್ಗಕ್ಕೆ ಬದುಕು ನೀಡಿದ ಲಕ್ಷ್ಮಣತೀರ್ಥ ಇಂದು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಲಕ್ಷ್ಮಣತೀರ್ಥ ನದಿ ಉಳಿಸಿ ಅಭಿಯಾನ ಮತ್ತೆ ಆಗಬೇಕಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನವೂ ಇಲ್ಲೇ ಇದ್ದು, ಅರಣ್ಯದಂಚಿನ ಪ್ರದೇಶದಲ್ಲಿ ವನ್ಯಪ್ರಾಣಿ ಮತ್ತು ಮಾನವ ಸಂಘರ್ಷ ನಿತ್ಯ ನಡೆಯುತ್ತಿದ್ದು, ಇದಕ್ಕೆ ಹಲವು ಪರಿಹಾರ ಕಂಡುಕೊಳ್ಳಲು ಪ್ರಯತ್ನ, ಪ್ರಯೋಗ ನಡೆದಿದೆ. ನಾವು ಬದುಕಬೇಕಾದರೆ ಇತರ ಜೀವಿಗಳು, ಪಶುಪಕ್ಷಿಗಳು ಇರಬೇಕು. ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ಲಕ್ಷ್ಮಣತೀರ್ಥ, ಕಾವೇರಿ ಅಂತ ನೋಡದೆ ನೀರಿನ ಹರಿವನ್ನು ಉಳಿಸಿಕೊಳ್ಳುವ ಕಡೆ ಗಮನಹರಿಸಬೇಕು. ಯುವ ಸಮೂಹ ಇತ್ತ ಗಂಭೀರ ಚಿಂತನೆ ನಡೆಸಿ ಭವಿಷ್ಯದ ಕರಾಳತೆಯನ್ನು ಅರಿತು ಪರಿಸರ ಉಳಿಸುವತ್ತ ಮುಂದಡಿಯಿಡಬೇಕು ಎಂದು ಸಲಹೆ ನೀಡಿದರು.


ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಗ್ರಂಥಪಾಲಕ ಡಾ.ಎನ್.ಕರುಣಾಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವನ್ಯಜೀವಿ ಛಾಯಾಗ್ರಾಹಕ ಸೇನಾನಿ, ಪ್ರಾಂಶುಪಾಲ ಪುಟ್ಟಶೆಟ್ಟಿ, ಸಹಾಯಕ ಪ್ರಾಧ್ಯಾಪಕ ಡಾ.ಕೆ.ಪಿ.ಪ್ರಸನ್ನ, ಅಧ್ಯಾಪಕರು, ವಿದ್ಯಾರ್ಥಿನಿಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net