

ಸ್ಥಳ ಪರಿಶೀಲನೆ ನಡೆಸಿದ ಸಂಸದ ಡಾ.ಸಿ.ಎನ್. ಮಂಜುನಾಥ್, ಶಾಸಕ ಸಿ.ಪಿ.ಯೋಗೇಶ್ವರ್
ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ಹೈವೇಗೆ ಚನ್ನಪಟ್ಟಣ ತಾಲೂಕಿನಿಂದ ಪ್ರವೇಶ ಮತ್ತು ನಿರ್ಗಮನ ಕಲ್ಪಿಸಲು ರಾಂಪುರ ಬಳಿ ಉದ್ದೇಶಿಸಿರುವ ಸ್ಥಳವನ್ನು ಸಂಸದ ಡಾ.ಸಿ.ಎನ್. ಮಂಜುನಾಥ್ ಪರಿಶೀಲನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ಶಾಸಕ ಸಿ.ಪಿ.ಯೋಗೇಶ್ವರ್ ಜತೆಗೂಡಿ ಪರಿಶೀಲನೆ ನಡೆಸಿದ ಸಂಸದರು, ಯೋಜನೆಯ ಸಾಧಕ& ಬಾಧಕಗಳ ಬಗ್ಗೆ ಚರ್ಚೆ ನಡೆಸಿದರು. ಸದ್ಯ ರಾಂಪುರ ಬಳಿ ಪ್ರವೇಶ ಮತ್ತು ನಿರ್ಗಮನಕ್ಕೆ ಯೋಜನೆ ರೂಪಿಸಿದ್ದು, ಈ ಜಾಗವನ್ನು ಪರಿಶೀಲನೆ ನಡೆಸಲಾಯಿತು.
ಈ ಜಾಗದಲ್ಲಿ ಸಂಪರ್ಕ ಕಲ್ಪಿಸುವುದರಿಂದ ಚನ್ನಪಟ್ಟಣ ತಾಲೂಕಿನ ಜನತೆಗೆ ಅಷ್ಟಾಗಿ ಉಪಯೋಗವಾಗುವುದಿಲ್ಲ. ಈ ವ್ಯವಸ್ಥೆಯನ್ನು ಕಣ್ವ ಜಂನ್ ಬಳಿ ಕಲ್ಪಿಸಿದರೆ, ಚನ್ನಪಟ್ಟಣ ಸೇರಿ ಕಣ್ವ ಜಲಾಶಯ, ಕೆಂಗಲ್ ದೇವಸ್ಥಾನ ಮತ್ತು ಹಳೆ ಹೆದ್ದಾರಿಗೆ ಹೋಗುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಕ್ರಮ ವಹಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಸ್ಥಳದಲ್ಲಿದ್ದ ಶಾಸಕ ಸಿ.ಪಿ.ಯೋಗೇಶ್ವರ್ ಧ್ವನಿಗೂಡಿಸಿ, ಲಂಬಾಣಿ ತಾಂಡ್ಯದ ಬಳಿ ಪ್ರವೇಶ ಹಾಗೂ ನಿರ್ಗಮನಕ್ಕೆ ವ್ಯವಸ್ಥೆ ಮಾಡುವುದು ಸೂಕ್ತ. ಇದರಿಂದ ತಾಲೂಕಿನ ಜನತೆಯಷ್ಟೇ ಅಲ್ಲದೇ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಂಸದ ಹಾಗೂ ಶಾಸಕರಿಗೆ ಇದೇವೇಳೆ ಎಕ್ಸ್ಪ್ರೆಸ್ ಹೈವೇಯ ಸಮಸ್ಯೆಗಳ ದರ್ಶನವಾಯಿತು. ಮೊದಲಿಗೆ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ನಿರ್ಮಾಣವಾಗಿರುವ ಅಂಡರ್ ಪಾಸ್ ಅನ್ನು ಇಬ್ಬರೂ ಜನಪ್ರತಿನಿಧಿಗಳು ವೀಸಿದರು. ಈ ವೇಳೆ ಸ್ಥಳಿಯರು ಅಂಡರ್ ಪಾಸ್ ಕಾಮಗಾರಿಯನ್ನು ವೈಾನಿಕವಾಗಿ ಮಾಡಿಲ್ಲ, ಮಳೆಬಂದರೆ ನೀರು ಹರಿದುಹೋಗುವ ವ್ಯವಸ್ಥೆ ಮಾಡಿಲ್ಲದ ಕಾರಣ ಇಲ್ಲಿ ಸಾಕಷ್ಟು ನೀರು ನಿಲ್ಲುತ್ತದೆ. ಈ ರಸ್ತೆ ಕುಣಿಗಲ್ ಮುಖ್ಯರಸ್ತೆಯಾಗಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.
ಆದರೆ, ಅಂಡರ್ ಪಾಸ್ ಕಾಮಗಾರಿ ಸಂಪೂರ್ಣವಾಗಿಲ್ಲದ ಕಾರಣ ಸಾಕಷ್ಟು ಸಮಸ್ಯೆಯಾಗಿದೆ ಎಂದು ವಿವರಿಸಿದರು. ಇದೇವೇಳೆ ಹೆದ್ದಾರಿಗೆ ಭೂಸ್ವಾಧಿನವಾಗಿರುವ ರೈತರು, ನಮ್ಮ ಜಮೀನನ್ನು ಸ್ವಾಧಿನಪಡಿಸಿಕೊಂಡು ಕಾಮಗಾರಿ ಮುಗಿಸಲಾಗಿದೆ. ಆದರೆ, ಇದುವರೆಗೂ ನಮಗೆ ಪರಿಹಾರದ ಹಣ ನೀಡಿಲ್ಲ ಎಂದು ಜನಪ್ರತಿನಿಧಿಗಳ ಗಮನಕ್ಕೆ ತಂದರು.
ಗ್ರಾಮದ ಸ್ಮಶಾನಕ್ಕೆ ತೆರಳಲು ಇರುವ ಅಂಡರ್ ಪಾಸ್ ಜಾಗಕ್ಕೆ ಪರಿಹಾರ ನೀಡಿಲ್ಲ, ಈ ಜಾಗವನ್ನು ಅವರು ಭೂ ಮಾಲೀಕರು ಮತ್ತೆ ಸ್ವಾಧಿನಪಡಿಸಿಕೊಂಡರೆ ನಮಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸಿ ಎಂದು ಕುಂತೂರುದೊಡ್ಡಿ ಗ್ರಾಮಸ್ಥರು ಸಂಸದರಿಗೆ ಮನವಿ ಸಲ್ಲಿಸಿದರು.
ಒಟ್ಟಾರೆ, ಅವೈಾನಿಕ ಕಾಮಗಾರಿ, ಭೂ ಸ್ವಾಧಿನ ಪರಿಹಾರ ವಿಳಂಬ ಸೇರಿ ಹಲವು ಸಮಸ್ಯೆಗಳು ಸಂಸದ ಹಾಗೂ ಶಾಸಕರ ಗಮನಕ್ಕೆ ಬಂದವು. ಕೂಡಲೇ ಇದನ್ನು ಪರಿಹರಿಸಿ ಎಂದು ಸಂಸದರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ತಾಲೂಕಿನ ಕಣ್ವ ಬಳಿ ಪ್ರವೇಶ ಮತ್ತು ನಿರ್ಗಮನ ಕಲ್ಪಿಸಿದರೆ ಚನ್ನಪಟ್ಟಣ ಸೇರಿ, ಕಣ್ವ ಜಲಾಶಯ, ಕೆಂಗಲ್ ದೇವಸ್ಥಾನ ಮತ್ತು ಹಳೇ ಎನ್.ಎಚ್. 75ಕ್ಕೆ ಹೋಗುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೇಂದ್ರ ಹೆದ್ದಾರಿ ಸಚಿವರಿಗೂ ಮನವಿ ಸಲ್ಲಿಸಲಾಗಿದ್ದು, ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಡಾ.ಸಿ.ಎನ್. ಮಂಜುನಾಥ್ಸಂಸದರು