

ಬೆಂಗಳೂರು: ಫಸ್ಟ್ ಸರ್ಕಲ್ (ಎಫ್ಸಿ) ಸಂಸ್ಥೆ ವತಿಯಿಂದ ಜ.3ರಿಂದ ಜ.5ರವರೆಗೆ ಅರಮನೆ ಮೈದಾನದಲ್ಲಿ "ಉದ್ಯಮಿ ಒಕ್ಕಲಿಗ' ಸಮಾವೇಶ ನಡೆಯಲಿದೆ.
3ನೇ ಆವೃತ್ತಿ ಕಾರ್ಯಕ್ರಮ ಇದಾಗಿದೆ. ಈ ಬಾರಿ 1 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ರೈತರ ಸಂತೆ, ಗಂಗರು, ಹೊಯ್ಸಳರು, ಕೆಂಪೇಗೌಡರ ಆಳ್ವಿಕೆ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಲು ಮ್ಯೂಸಿಯಂ ಮಾದರಿಯನ್ನು ಪ್ರತಿಷ್ಠಾಪಿಸಲಾಗಿದೆ. 200 ಮಳಿಗೆಗಳು ಇರಲಿವೆ. ಹಲವು ವಿಷಯಗಳ ಕುರಿತು ವಿಚಾರ ಮಂಡಿಸಲಾಗುವುದು. ಒಕ್ಕಲಿಗ ಉದ್ಯಮಿಗಳ ಬೆಳವಣಿಗೆಗೆ ರೂಪಿಸಿರುವ ಕಾರ್ಯಕ್ರಮಗಳನ್ನು ಅನಾವರಣ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಭಾಗಿಯಾಗುವವರು ಎಫ್ಸಿ ನೆಕ್ಸ್ಟ್ ಆ್ಯಪ್ನಲ್ಲಿ ನೊಂದಣಿ ಮಾಡಿಕೊಳ್ಳಬಹುದು ಎಂದು ಫಸ್ಟ್ ಸರ್ಕಲ್ ಅಧ್ಯೆ ನಂದೀಶ್ ರಾಜೇಗೌಡ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆ್ಯಪ್ ಮೂಲಕ ಮುಂದಿನ 3 ವರ್ಷಗಳಲ್ಲಿ ಅಂದಾಜು 7 ರಿಂದ 8 ಲಕ್ಷ ಉದ್ಯಮಿಗಳನ್ನು ಸೇರಿಸುವ ಗುರಿ ಹೊಂದಿದ್ದೇವೆ. ರಾಜ್ಯದ 14 ಜಿಲ್ಲೆಗಳಿಂದ 143 ತಾಲೂಕುಗಳಲ್ಲಿ ಸಮುದಾಯದ ಉದ್ದಿಮೆಗಳ ಕುರಿತು ಅಧ್ಯಯನ ಮಾಡಲಾಗುತ್ತಿದೆ. ಮೊದಲ ವರ್ಷ 10 ಲಕ್ಷ, ಎರಡನೇ ವರ್ಷ 20 ಲಕ್ಷ, ಮೂರನೇ ವರ್ಷ 30 ಲಕ್ಷ ಗ್ರಾಹಕರು ಹಾಗೂ ಅಂದಾಜು 7 ರಿಂದ 8 ಲಕ್ಷ ಉದ್ಯಮಿಗಳ ಮಾಹಿತಿ ಸಂಗ್ರಹಿಸುವ ಗುರಿ ಹೊಂದಿದ್ದೇವೆ ಎಂದು ನಂದೀಶ್ ರಾಜೇಗೌಡ ತಿಳಿಸಿದರು. ಚಂದ್ರಪ್ಪ, ಮಂಜುಳಾ ಪ್ರಕಾಶ್, ಎಂ.ಅಮರೇಶ, ಭುವನ ಸುರೇಶ್ ಮತ್ತಿತರರಿದ್ದರು.