ಎಸ್ಸಿ, ಎಸ್ಟಿ ಅನುದಾನ ದುರ್ಬಳಕೆಯಾಗದಂತೆ ನಿಗಾ ವಹಿಸಿ

ಎಸ್ಸಿ, ಎಸ್ಟಿ ಅನುದಾನ ದುರ್ಬಳಕೆಯಾಗದಂತೆ ನಿಗಾ ವಹಿಸಿ
Published on

ಅರಕಲಗೂಡು: ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಎಸ್ಸಿ, ಎಸ್ಟಿ ಅನುದಾನ ಬೇರೆ ಉದ್ದೇಶಗಳಿಗೆ ದುರ್ಬಳಕೆಯಾಗದಂತೆ ನಿಗಾ ವಹಿಸಿ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಶಾಸಕ ಎ.ಮಂಜು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಇತ್ತೀಚೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಮೀಸಲಾದ ಶೇ.25ರ ಹಣವನ್ನು ಇತರ ಕಾಮಗಾರಿಗಳಿಗೆ ಬಳಸದೆ ನಿಗದಿತ ಉದ್ದೇಶಕ್ಕಷ್ಟೆ ಬಳಸಬೇಕು. ಅನ್ಯ ಉದ್ದೇಶಕ್ಕೆ ಬಳಕೆ ಮಾಡಿರುವುದು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಬೇಕು, ಅನುದಾನದಲ್ಲಿ ಹೆಚ್ಚಿನ ಹಣವನ್ನು ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಗಳನ್ನು ಕಲ್ಪಿಸಲು ಬಳಕೆ ಮಾಡಬೇಕು. ಸೌಲಭ್ಯಗಳನ್ನು ಪಡೆದವರಿಗೆ ಮತ್ತೆ ನೀಡದೆ ಸಮುದಾಯದ ಕಟ್ಟ ಕಡೆಯ ವ್ಯಕ್ತಿಯನ್ನು ಗುರುತಿಸಿ ನೀಡುವ ಮೂಲಕ ಮುಖ್ಯವಾಹಿನಿಗೆ ತರಬೇಕು. ಪರಿಶಿಷ್ಟರ ಕಾಲನಿಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಲ್ಲಿನ ಜನರಿಂದ ಲಿಖಿತವಾಗಿ ಪಡೆದು ಸಭೆಯಲ್ಲಿ ಮಂಡಿಸುವಂತೆ ಹಾಗೂ ಪ್ರತಿ ಗ್ರಾಮದಲ್ಲೂ ಸ್ಮಶಾನಕ್ಕೆ ಜಮೀನು ಗುರುತಿಸಿ ಅಗತ್ಯ ಸವಲತ್ತುಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಪಟ್ಟಣದಲ್ಲಿ ನನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನದ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರು ಸಭೆಯಲ್ಲಿ ಆಗ್ರಹಿಸಿದರು. ಕಳೆದ ಏಳು ವರ್ಷಗಳ ಹಿಂದೆ ಅಂಬೇಡ್ಕರ್ ಭವನದ ಹಳೆಯ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಕಾಮಗಾರಿ ಕುಂಟುತ್ತಾ ಸಾಗಿದ್ದು, ಈವರೆಗೂ ಪೂರ್ಣಗೊಂಡಿಲ್ಲ. ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಮುದಾಯದವರು ಮದುವೆ ಮುಂತಾದ ಕಾರ್ಯಕ್ರಮಗಳನ್ನು ನಡೆಸಲು ಪರದಾಡುವಂತಾಗಿದೆ. ನೀವು ಸಚಿವರಾಗಿದ್ದಾಗ ಭೂಮಿ ಪೂಜೆ ನಡೆಸಿದ್ದು, ಈಗ ನೀವೆ ಆಸಕ್ತಿ ವಹಿಸಿ ಭವನದ ಕಾಮಗಾರಿ ಪೂರ್ಣಗೊಳಿಸಬೇಕು. ತಾಲೂಕು ಕಚೇರಿ ಮುಂದೆ ಇರುವ ಅಂಬೇಡ್ಕರ್ ಪುತ್ಥಳಿಯ ಛಾವಣಿ ಕಾಮಗಾರಿ ಸಹ ವರ್ಷಗಳಿಂದ ನನೆಗುದಿಗೆ ಬಿದ್ದಿದೆ ಅದನ್ನು ಸಹ ಪೂರ್ಣಗೊಳಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.

ನಾನು ಸಚಿವನಾಗಿದ್ದಾಗ ಹಳೆಯ ಕಟ್ಟಡ ಕೆಡವಿ ಸಸುಸಜ್ಜಿತ ಹೈಟೆಕ್ ಮಾದರಿ ಕಟ್ಟಡ ನಿರ್ಮಿಸಲು ಕ್ರಮ ಕೈಗೊಂಡು ರೂ 3.5 ಕೋಟಿ ರೂ. ಅನುದಾನ ನೀಡಿದ್ದೆ. ಇದರ ವಿರುದ್ಧ ಕೆಲವರು ಪ್ರತಿಭಟನೆ ನಡೆಸಿ ಕಾಮಗಾರಿಗೆ ಅಡ್ಡಗಾಲು ಹಾಕಿದ್ದರು. ಈಗ ಮತ್ತೆ ನಾನೆ ಶಾಸಕನಾಗಿದ್ದು, ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ ಶಾಸಕ ಎ. ಮಂಜು, ಕಾಮಗಾರಿಯ ಪಗ್ರತಿ ಪರಿಶೀಲಿಸಲು ಸಭೆ ಏರ್ಪಡಿಸಿ ಗುತ್ತಿಗೆದಾರರು ಹಾಗೂ ದಲಿತ ಸಂಘಟನೆಗಳ ಮುಖಂಡರನ್ನು ಆಹ್ವಾನಿಸುವಂತೆ ತಾಪಂ ಇಒ ರವಿಕುಮಾರ್‌ಗೆ ಸೂಚಿಸಿದರು. ಅಂಬೇಡ್ಕರ್ ಪುತ್ಥಳಿ ಛಾವಣಿ ಕಾಮಗಾರಿಯನ್ನು ಏ.14 ಅಂಬೇಡ್ಕರ್ ಜಯಂತಿಗೆ ಪೂರ್ಣಗೊಳಿಸಿ ಕೊಡುವುದಾಗಿ ಹೇಳಿದರು.

ಪಟ್ಟಣದ ಕೆಲವೆಡೆ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ಸಿಂಗಪಟ್ಟಲದಮ್ಮ ದೇವಸ್ಥಾನ ಬಳಿ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಮುಖಂಡ ಲಿಂಗರಾಜು ದೂರಿದರು. ಸ್ಮಶಾನ ಜಾಗ ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸುವಂತೆ ಶಾಸಕ ಎ.ಮಂಜು ಪ.ಪಂ. ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾವಿಗೆ ಖಡಕ್ ಸೂಚನೆ ನೀಡಿದರು. ಸ್ಲಂ ವಾರ್ಡ್‌ಗಳಲ್ಲಿ ಮನೆ ನಿರ್ಮಿಸಿಕೊಂಡಿರುವ ನಿವಾಸಿಗಳಿಗೆ ಹಕ್ಕು ಪತ್ರ ನೀಡುವಂತೆ ಸೂಚಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಮಿತಿ ಸಭೆಯನ್ನು ನಿಗದಿತವಾಗಿ ನಡೆಸದ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ವಕೀಲ ಬಿ.ಸಿ.ರಾಜೇಶ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಭೆ ನಡೆದಿತ್ತು. ಒಂದು ವರ್ಷದ ಬಳಿಕ ಸಭೆ ಕರೆಯಲಾಗಿದೆ. ಮೂರು ತಿಂಗಳಿಗೊಮ್ಮೆ ಸಭೆ ಕರೆದು ಪ್ರಗತಿ ಪರಿಶೀಲಿಸುವಂತೆ ಸರ್ಕಾರದ ಸೂಚನೆ ಇದ್ದರೂ ನಿರ್ಲಕ್ಷೃ ತೋರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಿಗದಿಯಂತೆ ಸಭೆ ನಡೆಸಬೇಕು ಹಿಂದೆ ನಡೆದ ಸಭೆಯಲ್ಲಿ ಚರ್ಚಿತವಾದ ವಿಷಯಗಳ ಬಗ್ಗೆ ಕೈಗೊಂಡಿರುವ ಕ್ರಮಗಳ ವರದಿಯನ್ನು ವಾರಕ್ಕೆ ಮುಂಚೆ ಸಮುದಾಯದ ಮುಖಂಡರಿಗೆ ನೀಡುವಂತೆ ಶಾಸಕರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ದಲಿತ ಕಾಲನಿಗಳಲ್ಲಿ ಮೂಲಸೌಕರ್ಯಗಳ ಕೊರತೆ, ಜಮೀನು ಒತ್ತುವರಿ ತೆರವು, ಕುಳುವಾಡಿಕೆ ಜಮೀನಿಗೆ ಹಕ್ಕುಪತ್ರ ನೀಡದಿರುವುದು, ಬಗರ್‌ಹುಕುಂ ಯೋಜನೆಯಲ್ಲಿ ಪರಿಶಿಷ್ಟರ ಅರ್ಜಿ ವಿಲೆಯಾಗದೆ ಬಾಕಿ ಉಳಿದಿರುವುದು, ವಿದ್ಯಾರ್ಥಿ ನಿಲಯಗಳಲ್ಲಿ ಪೌಷ್ಟಿಕ ಆಹಾರ ನೀಡದಿರುವುದು ಸೇರಿದಂತೆ ಹಲವು ವಿಷಯಗಳು ಸಭೆಯಲ್ಲಿ ಚರ್ಚಿತವಾದವು. ಮುಖಂಡ ನಿಂಗರಾಜ್, ಚಂದ್ರಯ್ಯ, ಬರಗೂರು ರವಿ, ದುಮ್ಮಿಕೃಷ್ಣ, ಗಣೇಶ್ ವೇಲಾಪುರಿ, ನಾಗರಾಜ್ ಸೇರಿದಂತೆ ಹಲವು ಮುಖಂಡರು ಚರ್ಚೆಯಲ್ಲಿ ಭಾಗವಹಿಸಿದ್ದರು. ತಹಸೀಲ್ದಾರ್ ಕೆ.ಸಿ. ಸೌಮ್ಯಾ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net