

ಕುಶಾಲನಗರ: ಕುಶಾಲನಗರ ತಾಲೂಕಿನ ದೊಡ್ಡತ್ತೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಸಮವಸ್ತ್ರವನ್ನು ಬುಧವಾರ ವಿತರಿಸಿದರು.
ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಎಲ್ಲರೂ ತಮ್ಮ ತಮ್ಮ ಗ್ರಾಮದ ಶಾಲೆಯ ಆಡಳಿತ ಮಂಡಳಿಯೊಂದಿಗೆ ಸಹಕರಿಸಬೇಕು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವುದು ಕಡಿಮೆ ಆಗಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಬೇಕಾಗಿದೆ. ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಉಂಟಾದಲ್ಲಿ ಅಂದರೆ, ಕುಡಿಯುವ ನೀರು, ಕಟ್ಟಡಗಳ ಸಮಸ್ಯೆ, ಆರೋಗ್ಯ, ರಸ್ತೆ, ಉಪಾಹಾರ ಮೊದಲಾದ ಸಮಸ್ಯೆಗಳ ಬಗ್ಗೆ ನನಗೆ ಆಗಲಿ, ಸ್ಥಳೀಯ ಜನಪ್ರತಿನಿಧಿಗಳಿಗಾಗಲಿ ಮಾಹಿತಿ ನೀಡಿದರೆ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದರು.
ಮಕ್ಕಳ ಮುಖಾಂತರವೇ ದೇಶ ಬದಲಾವಣೆಯಾಗಲು ಸಾಧ್ಯ. ಸರ್ಕಾರಿ ಶಾಲೆಯ ಮಕ್ಕಳಿಗೆ ನಮ್ಮಿಂದ ಹೆಚ್ಚಿನ ಪ್ರೋತ್ಸಾಹ, ಅನುದಾನ ನೀಡಲಾಗುವುದು. ಸರ್ಕಾರಿ ಶಾಲೆಯ ಉನ್ನತಿಗಾಗಿ, ಮಕ್ಕಳ ಹಿತಕ್ಕಾಗಿ ಸರ್ಕಾರವು ಮತ್ತು ನಾನು ಯಾವಾಗಲು ನಿಮ್ಮ ಪರ ಇರುತ್ತೇವೆ ಎಂದು ಭರವಸೆ ನೀಡಿದರು.
ನಂತರ ಶಾಸಕರು ಶಾಲೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರೊಂದಿಗೆ ಶಾಲೆಗೆ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಗ್ರಾಮದ ರಸ್ತೆಗಳ ಪ್ರಗತಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಮುಖ್ಯಶಿಕ್ಷಕ ಗೋವಿಂದ್‌ರಾಜು, ಸಮಾಜ ಸೇವಕ ಡಿ.ಸಿ.ಪ್ರಕಾಶ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಶಾಲೆಯ ಸಹ ಶಿಕ್ಷಕರು, ಶಾಲೆಯ ಆಡಳಿತ ಮಂಡಳಿಯ ಪ್ರಮುಖರಾದ ಶೇಖರ್, ನಾರಾಯಣ, ಗ್ರಾಮ ಪಂಚಾಯಿತಿ ಸದಸ್ಯರಾದ ಖತೀಜ, ಟಿ.ಪಿ.ಹಮೀದ್, ಊರಿನ ಪ್ರಮುಖರಾದ ಸಂತೋಷ್, ಸುರೇಶ್, ಅಶ್ವಥ್ ಉಪಸ್ಥಿತರಿದ್ದರು.