ಕನ್ನಡ ನಾಡು ಕಂಡ ದಾರ್ಶನಿಕ ವಿಶ್ವೇಶ್ವರಯ್ಯ: ಡಾ.ಮಹೇಶ ಜೋಶಿ ಬಣ್ಣನೆ

joshi
Published on

ಬೆಂಗಳೂರು: ಕರ್ನಾಟಕ ವಿಜ್ಞಾನ, ತಂತ್ರಜ್ಞಾನಗಳ ತವರೂರಾಗಿರುವುದರ ಹಿಂದೆ ಸರ್​ ಎಂ. ವಿಶ್ವೇಶ್ವರಯ್ಯ ಅವರ ಅಗಾಧ ಪರಿಶ್ರಮ, ದೂರದೃಷ್ಟಿ, ಸಮಾಜಮುಖಿ ಯೋಜನೆಗಳಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಆಯೋಜಿಸಿದ್ದ ಸರ್​ ಎಂ. ವಿಶ್ವೇಶ್ವರಯ್ಯ ಜಯಂತಿ ಮತ್ತು ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಮೈಸೂರು ಮಹಾರಾಜರು, ದಿವಾನರು ವಿಶ್ವೇಶ್ವರಯ್ಯ ಪ್ರತಿಭೆಯನ್ನು ಮನಗಂಡಿದ್ದರು. ಹೀಗಾಗಿ ಅವರ ಯೋಜನೆಗಳ ಅನುಷ್ಠಾನಕ್ಕೆ ಸಂಪೂರ್ಣ ಬೆಂಬಲ ನೀಡಿದರು. ಹೀಗಾಗಿ ಕರ್ನಾಟಕದ ನಿರ್ಮಾಣಕ್ಕೆ ಕಾರಣರಾದರು.

ಕನ್ನಡ ಸಾಹಿತ್ಯ ಪರಿಷತ್ತಿನ ಆಧಾರಸ್ತಂಭಗಳಲ್ಲಿ ವಿಶ್ವೇಶ್ವರಯ್ಯ ಸಹ ಒಬ್ಬರು. ದೇಶದ ಬೆಳವಣಿಗೆಗೆ ನೀಲಿನೆ ಹಾಕಿದ್ದರು. ಬಡತನದ ಬೇಗೆ ಅವರಿಗೆ ಬದುಕು ಏನೆಂಬುದನ್ನು ಕಲಿಸಿತ್ತು. ಹೀಗಾಗಿ ಆಡಳಿತಕ್ಕೆ ಮಾನವೀಯತೆಯ ಸ್ಪರ್ಶ ನೀಡಿದರು. ಶಿಸ್ತು ಮತ್ತು ಪ್ರಾಮಾಣಿಕತೆಗೆ ರೂಪಕದಂತಿದ್ದ ಅವರು ತಮ್ಮ ಜೀವಿತಾವಧಿಯಲ್ಲೇ ದಂತಕಥೆಯಾಗಿದ್ದರು ಎಂದು ಹೇಳಿದರು.

ಕನ್ನಡಿಗರು ವಿಶ್ವೇಶ್ವರಯ್ಯನವರ ಕೊಡುಗೆಗಳನ್ನು ಸ್ಮರಿಸಿಕೊಂಡು 'ಇವರು ನಮ್ಮವರು' ಎನ್ನುತ್ತ ಹೆಮ್ಮೆಯಿಂದ ಬೀಗಬೇಕು. ಅಭಿವೃದ್ಧಿ ಹೇಗೆ ಯೋಜಿತವಾಗಿ ನಾಡಿಗೆ ಬರಬೇಕು ಎಂಬುದನ್ನು ಮನಗಂಡಿದ್ದರು ಎಂದು ಸಂಶೋಧಕ ಮತ್ತು ಕಾದಂಬರಿಕಾರ ಡಾ.ಗಜಾನನ ಶರ್ಮ ತಿಳಿಸಿದರು.

2024ನೇ ಸಾಲಿನ 'ಗೌರಮ್ಮ ಗಂಗಾಧರಯ್ಯ ಮಕ್ಕಳ ಸಿಬ್ಬಂದಿ ಸೇವಾ ದತ್ತಿ ಪ್ರಶಸಿ'ಯನ್ನು ಎಂ.ಎಸ್​. ಸತೀಶ್​ ಕುಮಾರ್​ ಅವರಿಗೆ ಹಾಗೂ 'ರಮಾದೇವಿ ವಿಶ್ವೇಶ್ವರಯ್ಯ ದತ್ತಿ ಪ್ರಶಸ್ತಿ'ಯನ್ನು ದಯಾನಂದ ಮೂರ್ತಿ ಅವರಿಗೆ ಪ್ರದಾನ ಮಾಡಲಾಯಿತು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಅಧ್ಯ ರಮೇಶಚಂದ್ರ ಲಹೋಟಿ, ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕ ಡಾ.ಮೀರಾ ಶಿವಲಿಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net