

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ‘ಗುಣ ನಿಯಂತ್ರಣ ಪ್ರಯೋಗಾಲಯ’ ಕಚೇರಿಯಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಧೀಕ್ಷಕ ಅಭಿಯಂತರ ಶಿವಕುಮಾರ್(45)ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
1977ರ ಡಿ.12ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಚಂದ್ರವಾಡಿ ಗ್ರಾಮದಲ್ಲಿ ಜನಿಸಿದ್ದ ಶಿವಕುಮಾರ್, 2005ರ ಡಿ.14ರಂದು ಸರ್ಕಾರಿ ಕೆಲಸಕ್ಕೆ ಸೇರಿಕೊಂಡಿದ್ದರು. ಪಾಲಿಕೆಯ ಬೃಹತ್ ನೀರುಗಾಲುವೆ ವಿಭಾಗದ ಅಧೀಕ್ಷಕ ಅಭಿಯಂತರ ಆಗಿದ್ದರು. ಪತ್ನಿ, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧುಬಳಗವನ್ನು ಆಗಲಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಗುರುವಾರ ಕುಟುಂಬಸ್ಥರಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಕುಮಾರ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ವಾರದ ಹಿಂದೆಷ್ಟೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಲಕಾರಿಯಾಗದೆ ನಿಧನರಾದರು. ಆ.11ರಂದು ಪ್ರಯೋಗಾಲಯ ಕಚೇರಿಯಲ್ಲಿ ಬೆಂಜಿನ್ ಕೆಮಿಕಲ್ ಪರೀಕ್ಷಿಸುವಾಗ ನಡೆದ ಅಗ್ನಿ ದುರಂತದಲ್ಲಿ ಶಿವಕುಮಾರ್, ಕಾರ್ಯಪಾಲಕ ಅಭಿಯಂತರರಾದ ಕಿರಣ್, ಸಂತೋಷ್ ಕುಮಾರ್, ವಿಜಯಮಾಲ, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಧರ್, ಪ್ರಥಮ ದರ್ಜೆ ಸಹಾಯಕ ಸಿರಾಜ್, ಆಪರೇಟರ್ ಜ್ಯೋತಿ, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಶ್ರೀನಿವಾಸ್ ಹಾಗೂ ಗಣಕಯಂತ್ರ ನಿರ್ವಾಹಕ ಮನೋಜ್ ಸೇರಿ 9 ಮಂದಿಗೆ ಸುಟ್ಟ ಗಾಯವಾಗಿತ್ತು. ಇವರನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಗಾಯಾಳುಗಳ ಪೈಕಿ 7 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ತುಸು ಹೆಚ್ಚು ಗಾಯಗೊಂಡಿದ್ದ ಶಿವಕುಮಾರ್ ಹಾಗೂ ಜ್ಯೋತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಯಿತು. ಆದರೆ, ಸತತ 17 ದಿನಗಳ ಕಾಲ ಚಿಕಿತ್ಸೆ ನೀಡಿದ್ದರೂ ಶಿವಕುಮಾರ್ ಬದುಕುಳಿಯಲಿಲ್ಲ. ಸದ್ಯ ಜ್ಯೋತಿಗೆ ಚಿಕಿತ್ಸೆ ಮುಂದುವರಿದಿದ್ದು, ಈಕೆಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಪಾಲಿಕೆಯ ಪ್ರಯೋಗಾಲಯ’ ಕಚೇರಿಯಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಇರಲಿಲ್ಲ. ರಾಷ್ಟ್ರೀಯ ಕಟ್ಟಡ ಸಂಹಿತೆ (ಎನ್‌ಬಿಸಿ) ನಿಯಮದಂತೆ ಪರೀಕ್ಷೆ ಮತ್ತು ಪ್ರಯೋಗ ಮಾಡುವ ಯಾವುದೇ ಕಚೇರಿಗಳಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಇರಬೇಕಿತ್ತು. ಈ ವ್ಯವಸ್ಥೆ ಇಲ್ಲದಿರುವ ಕಾರಣ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿವಕುಮಾರ್ ಅನ್ಯಾಯವಾಗಿ ಸಾವನ್ನಪ್ಪಿರುವುದು ಬೇಸರ ತಂದಿದೆ.
ಶೇಷಾದ್ರಿಪುರ ಅಪೋಲೊ ಆಸ್ಪತ್ರೆಯ ಮುಖ್ಯಸ್ಥ ಡಾ.ಉದಯ್ ಮಾತನಾಡಿ, ಬಿಬಿಎಂಪಿ ಇಂಜಿನಿಯರ್ ಶಿವಕುಮಾರ್ ನಮ್ಮೊಂದಿಗಿಲ್ಲ. ವಾರದ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಸಂಜೆ 7 ಗಂಟೆಗೆ ಮೃತಪಟ್ಟಿದ್ದಾರೆ. ದೇಹದ ಉಸಿರಾಟ ಭಾಗಕ್ಕೆ ಸಾಕಷ್ಟು ಹಾನಿಯಾಗಿತ್ತು. ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದೆವು ಎಂದರು. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಸೇರಿ ಇತರ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದರು.
ಡಿಸಿಎಂ ಸಂತಾಪ:
ಮುಖ್ಯ ಇಂಜಿನಿಯರ್ ಶಿವಕುಮಾರ್ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಾನು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದೆ. ವೈದ್ಯರು ಉತ್ತಮ ಚಿಕಿತ್ಸೆ ನೀಡಿದರೂ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಅವರು ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೆವು. ನಮ್ಮ ಪ್ರಾರ್ಥನೆಗೆ ಫಲ ಸಿಗಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಈ ಅವಘಡದಿಂದ ಪ್ರಾಣ ಕಳೆದುಕೊಂಡಿರುವುದು ಮನಸ್ಸಿಗೆ ನೋವು ಉಂಟು ಮಾಡಿದೆ. ಶಿವಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ಸದಸ್ಯರಿಗೆ ದೊರೆಯಲಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.