ಜರ್ಮನಿಯಲ್ಲಿ ಲಕ್ಷ ಲಕ್ಷ ದುಡಿಯುತ್ತಿದ್ದ ಇಂಜಿನಿಯರ್​ ಇಂದು ಬೆಂಗ್ಳೂರಲ್ಲಿ ಭಿಕ್ಷುಕ! ಕಾರಣ ಕೇಳಿದ್ರೆ ಮನಕಲಕುತ್ತೆ | Engineer Now Beggar

Engineer Now Beggar
Published on

Engineer Now Beggar : ಜರ್ಮನಿಯ ಪ್ರಖ್ಯಾತ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇಂದು ಬೆಂಗಳೂರಿನಲ್ಲಿ ಭಿಕ್ಷುಕರಾಗಿ ಜೀವನ ನಡೆಸುತ್ತಿದ್ದಾರೆ ಅಂದರೆ ನೀವು ನಂಬುತ್ತೀರಾ? ನಿಮಗೆ ಅಚ್ಚರಿಯಾದರೂ ಇದು ಸತ್ಯ. ಇಂತಹದೊಂದು ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶರತ್ ಯುವರಾಜ ಎಂಬುವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಜರ್ಮನಿಯಲ್ಲೇ ವ್ಯಾಸಂಗ ಮುಗಿಸಿ ದೊಡ್ಡ ಟೆಕ್ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ತನ್ನ ಗೆಳತಿಯ ಅಗಲಿಕೆ ಹಾಗೂ ತಂದೆ-ತಾಯಿಯ ಸಾವಿನಿಂದಾಗಿ ಇಂದು ಈ ರೀತಿ ಬದುಕುತ್ತಿರುವುದಾಗಿ ತಿಳಿಸಿದ್ದಾರೆ. ಸಾವಿನ ಬಳಿಕ ಕುಡಿಯಲು ಆರಂಭಿಸಿದೆ ಎಂದು ಹೇಳಿದ್ದಾರೆ.

ವೈರಲ್​ ವಿಡಿಯೋದುದ್ದಕ್ಕೂ, ಭಿಕ್ಷುಕ ವಿಜ್ಞಾನ ಪುಸ್ತಕಗಳ ಬಗ್ಗೆ ಇಂಗ್ಲಿಷ್​ನಲ್ಲೇ ಮಾತನಾಡಿದ್ದಾರೆ. ತನ್ನನ್ನು ಇಂಜಿನಿಯರ್ ಎಂದು ಪರಿಚಯಿಸಿಕೊಳ್ಳುತ್ತಾರೆ ಮತ್ತು ಮೆಂಡ್ ಟ್ರೀ ಹಾಗೂ ಗ್ಲೋಬಲ್ ವಿಲೇಜ್‌ನಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿರುವುದಾಗಿ ಹೇಳುತ್ತಾರೆ. ವಿಡಿಯೋದಲ್ಲಿ ಕೆಂಪು ಬಣ್ಣದ ಕೊಳಕು ಶರ್ಟ್ ಮತ್ತು ಜೀನ್ಸ್ ಧರಿಸಿದ್ದಾರೆ.

ಯಾವುದಾದರೂ ಕೆಲಸಕ್ಕೆ ಹೋಗಬಹುದಿತ್ತಲ್ಲವೇ ಎಂದು ಕೇಳಿದಾಗ, ಇದೇ ನನ್ನ ಸ್ಥಳ ಮತ್ತು ಇದೇ ಪ್ರಸ್ತುತ ಎಂದು ಆತಂಕದಿಂದಲೇ ಉತ್ತರಿಸುತ್ತಾರೆ. ಆಲ್ಬರ್ಟ್ ಐನ್​ಸ್ಟೀನ್ ಮತ್ತು ಸಾಪೇಕ್ಷತಾ ಸಿದ್ಧಾಂತದ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ಮಧ್ಯೆ ಹಳೆಯದನ್ನು ನೆನೆದು ಭಾವುಕರಾಗುತ್ತಾರೆ.

ಸದ್ಯ ವಿಡಿಯೋ ವೈರಲ್​ ಆಗಿದ್ದು, ಈವರೆಗೆ 6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ಭಿಕ್ಷುಕನಿಗಾಗಿ ಹಲವು ಎನ್‌ಜಿಒಗಳೊಂದಿಗೆ ಮಾತನಾಡಿದ್ದೇನೆ ಮತ್ತು ಅವರನ್ನು ಮತ್ತೆ ಸಹಜ ಜೀವನಕ್ಕೆ ಕರೆತರುವ ಭರವಸೆ ಇದೆ ಎಂದು ಶರತ್ ವಿಡಿಯೋದಲ್ಲಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net