ಗ್ರಾಮೀಣ ಭಾಗದಲ್ಲಿ ನೀತಿ ಸಂಹಿತೆ ಜಾರಿ

30-hvr-05
Published on

ಹಾವೇರಿ: ರಾಜ್ಯ ಚುನಾವಣಾ ಆಯೋಗ ಗ್ರಾಪಂ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಸೋಮವಾರದಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿದೆ. ಕೋವಿಡ್ ಮಾರ್ಗಸೂಚಿಯಂತೆ ಚುನಾವಣೆ ನಡೆಸಲು ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಂಜಯ ಶೆಟ್ಟಣ್ಣವರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 22ರಂದು ನಡೆಯುವ ಮೊದಲ ಹಂತದಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳ 104 ಗ್ರಾಪಂಗಳಿಗೆ ಹಾಗೂ ಡಿ. 27ರಂದು ಮತದಾನ ನಡೆಯುವ ಎರಡನೇ ಹಂತದಲ್ಲಿಯೂ ನಾಲ್ಕು ತಾಲೂಕುಗಳ 105 ಗ್ರಾಪಂಗಳಿಗೆ ಚುನಾವಣೆ ನಡೆಸಲಾಗುವುದು. ಮೊದಲ ಹಂತಕ್ಕೆ ಡಿ. 7ರಂದು 2ನೇ ಹಂತಕ್ಕೆ ಡಿ. 11ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಎಸ್​ಪಿ ಕೆ.ಜಿ. ದೇವರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

ಸಭೆ, ಸಮಾರಂಭಕ್ಕೆ ಅನುಮತಿ ಕಡ್ಡಾಯ

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿದ್ದಂತೆ ಜನರು ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಕಂಡುಬರುತ್ತಿದೆ. ಇನ್ಮುಂದೆ ಯಾವುದೇ ಸಭೆ-ಸಮಾರಂಭ ಹಾಗೂ ಮದುವೆ ನಡೆಸುವ ಮುನ್ನ ಆಯಾ ತಹಸೀಲ್ದಾರ್ ಅಥವಾ ಜಿಲ್ಲಾಧಿಕಾರಿ ಕಚೇರಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಇಲ್ಲವಾದರೆ 25 ಸಾವಿರ ರೂ. ದಂಡವನ್ನು ಮದುವೆ ಮಂಟಪದ ಮಾಲೀಕರಿಗೆ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಎಚ್ಚರಿಸಿದರು.

ಕಾಲೇಜ್ ಬಂದ್ ಪರಿಶೀಲನೆ

ಭಾನುವಾರದವರೆಗೆ ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 130 ಪ್ರಕರಣಗಳಲ್ಲಿ 80ಕ್ಕೂ ಹೆಚ್ಚು ಪ್ರಕರಣಗಳು ವಿದ್ಯಾರ್ಥಿಗಳ ವಯೋಮಾನದವರಿಗೆ ಕಂಡುಬಂದಿದೆ. ಹಾವೇರಿ, ರಾಣೆಬೆನ್ನೂರು, ಅಕ್ಕಿಆಲೂರು ಹಾಗೂ ಹಾನಗಲ್ಲಗಳಲ್ಲಿ ಒಂದೇ ವಯೋಮಾನದವರಿಗೆ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ಕುರಿತಂತೆ ಪುನರ್ ಪರಿಶೀಲನೆಗೆ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ನಾಳಿನ ಫಲಿತಾಂಶ ಬಂದ ನಂತರ ಸಮಾಲೋಚಿಸಿ ಒಂದೊಮ್ಮೆ ಕಾಲೇಜ್ ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದ್ದರೆ ಪಾಸಿಟಿವ್ ಬಂದಿರುವ ನಗರದ ಕಾಲೇಜ್​ಗಳನ್ನು ಬಂದ್ ಮಾಡುವ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net