

ಚನ್ನರಾಯಪಟ್ಟಣ: ಜಾನಪದ ಕಲೆಗಳು ನಶಿಸಿ ಹೋಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ತಿಳಿಸಿದರು.
ಪಟ್ಟಣದ ಅನಿಕೇತನ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಜಾನಪದ ರಂಗಮಾಧ್ಯಮ ಚನ್ನರಾಯಪಟ್ಟಣ ಸಹಯೋಗದಲ್ಲಿ ಶುಕ್ರವಾರ ಮೂಡಲಪಾಯ ಯಕ್ಷಗಾನ ತರಬೇತಿ ಶಿಬಿರವನ್ನು ಮೃದಂಗ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಜಾನಪದ ಕಲೆಯು ಅತ್ಯಂತ ಶ್ರೇಷ್ಠ ಮತ್ತು ಹಳೆಯ ಕಲೆಯಾಗಿದ್ದು, ಇತ್ತೀಚಿನ ಮೂಲೆಗುಂಪಾಗುತ್ತಿದೆ. ಜಾನಪದ ಕಲೆಗಳು ಪ್ರೋತ್ಸಾಹದ ಕೊರತೆ, ಬದಲಾಗುತ್ತಿರುವ ಯುವಕರ ಜೀವನಶೈಲಿ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಪ್ರಭಾವದಿಂದ ನಶಿಸುತ್ತಿವೆ. ಕಂಸಾಳೆ, ಡೊಳ್ಳು ಕುಣಿತ, ಯಕ್ಷಗಾನ, ತೊಗಲು ಗೊಂಬೆ, ಗಾರುಡಿ ಗೊಂಬೆ ಮುಂತಾದ ಕಲೆಗಳು ಈ ಸಂಕಷ್ಟವನ್ನು ಎದುರಿಸುತ್ತಿವೆ. ಈ ಕಲೆಗಳನ್ನು ಉಳಿಸಲು ಯುವಜನರನ್ನು ಉತ್ತೇಜಿಸುವುದು, ಕಲಾವಿದರಿಗೆ ಬೆಂಬಲ ನೀಡುವುದು ಅತ್ಯಗತ್ಯ. ಯುವ ಪೀಳಿಗೆ ಸಮುದಾಯ ಕಲೆ ಸಾಹಿತ್ಯವನ್ನು ಬೆಳೆಸಿದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಎಲ್ಲ ಸಾಹಿತ್ಯಕ್ಕೂ ಮೂಲ ಜಾನಪದ ಸಾಹಿತ್ಯ. ಕಥೆ, ಕವಿತೆ, ವಚನ, ಒಗಟು, ದೊಡ್ಡಾಟ, ಸಣ್ಣಾಟ, ನಾಟಕ, ಗಾದೆಗಳನ್ನು ಶಿಕ್ಷಣ ಇಲ್ಲದಿದ್ದರೂ ಅಂದು ಅಕ್ಷರ ಕಟ್ಟಿ ಹಾಡಿದವರು ಜನಪದರು. ಆಚಾರ, ವಿಚಾರ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುತ್ತಿದ್ದರು. ಜನಪದ ಒಂದು ಪಾರಂಪರಿಕ ಜ್ಞಾನವಾಗಿದೆ ಎಂದು ಹೇಳಿದರು.
ನಮ್ಮಲ್ಲಿ ಇಂದಿಗೂ ಜಾನಪದ, ರಂಗಭೂಮಿ ಕಲಾವಿದರು ಎಲೆಮರೆಯ ಕಾಯಿಯಂತೆ ಕಲೆಯ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಸಂಘಸಂಸ್ಥೆಗಳು ಹಾಗೂ ಸರ್ಕಾರ ಅಂತಹ ಕಲಾವಿದರನ್ನು ಗುರುತಿಸಿ, ಸರ್ಕಾರಿ ಸವಲತ್ತುಗಳನ್ನು ದೊರಕಿಸಿಕೊಟ್ಟು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು. ಯುವ ಸಮೂಹಕ್ಕೆ ಜಾನಪದ ಕಲೆ, ರಂಗಭೂಮಿ ಕಲೆಯ ಬಗ್ಗೆ ಅರಿವು ಮೂಡಿಸಬೇಕು. ಜಾನಪದ ಭಾರತದ ಮೂಲ ಸಂಸ್ಕೃತಿಯಾಗಿದ್ದು, ಇದನ್ನು ಉಳಿಸಿ ಬೆಳೆಸುವಲ್ಲಿ ಸಂಘ-ಸಂಸ್ಥೆಗಳ ಪಾತ್ರ ಬಹುಮುಖ್ಯವಾಗಿದೆ. ಆದ್ದರಿಂದ ಮೇಲಿಂದ ಮೇಲೆ ಇಂತಹ ಜಾನಪದ ಕಾರ್ಯಕ್ರಮಗಳು ನೆರವೇರಬೇಕಿದೆ ಎಂದು ತಿಳಿಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಪುಟ್ಟಸ್ವಾಮಿ ಅರಳಗುಪ್ಪೆ ಮಾತನಾಡಿ, ಜಗತ್ತಿನ ಎಲ್ಲ ಶಿಷ್ಟ ಸಾಹಿತ್ಯಗಳಿಗೆ ಜಾನಪದ ಸಾಹಿತ್ಯ ಮೂಲ ಬೇರಾಗಿದ್ದು, ಜನಪದ ಸಂಸ್ಕೃತಿ ಗ್ರಾಮೀಣ ಜನರ ಅದರಲ್ಲೂ ರೈತಾಪಿ ಸಮುದಾಯದಲ್ಲಿ ಬೆಳೆದು ಬಂದಿರುವ ನಾಡಿನ ಅತ್ಯಂತ ಶ್ರೀಮಂತ ಸಂಸ್ಕೃತಿಯಾಗಿದೆ. ಈ ಪರಂಪರೆ ನಮ್ಮ ಜನ-ಜೀವನದ ಪ್ರತಿಬಿಂಬವಾಗಿದೆ. ಈ ಸಾಹಿತ್ಯದ ಸೊಗಡು ನಶಿಸದಂತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕು. ಗ್ರಾಮೀಣ ಜನರು ಪರಂಪರಗತವಾಗಿ ಬಂದಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಬೇಕು. ಮರೆಯಾಗುತ್ತಿರುವ ಜಾನಪದವನ್ನು ಉಳಿಸುವ ಉದ್ದೇಶದಿಂದ ಯಕ್ಷಗಾನ ಅಕಾಡೆಮಿಯಿಂದ ನಿರಂತರವಾಗಿ ಜಾನಪದ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ. ಜಾನಪದ ಸಾಹಿತ್ಯದಲ್ಲಿ ವಿಜ್ಞಾನ, ಅಧ್ಯಾತ್ಮ ಹಾಗೂ ನೈತಿಕ ಮೌಲ್ಯಗಳ ಪ್ರತಿಪಾದನೆ ಕಾಣಬಹುದಾಗಿದೆ. ಇಂದಿನ ಮಕ್ಕಳಿಗೆ ಬಾಲ್ಯದಿಂದಲೇ ಜಾನಪದದ ಮಹತ್ವ ತಿಳಿಸಿಕೊಡುವ ಕೆಲಸವನ್ನು ಪಾಲಕರು ಮಾಡಬೇಕು ಎಂದರು.
ಜಾನಪದ ರಂಗ ಮಾಧ್ಯಮದ ಅಧ್ಯಕ್ಷ ಡಾ. ಚಂದ್ರು ಕಾಳೇನಹಳ್ಳಿ, ಖಜಾಂಚಿ ನಾರಾಯಣಗೌಡ, ಜಾನಪದ ಕಲಾವಿದ ಶಿವನಗೌಡ ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಪುಟ್ಟೇಗೌಡ ಇದ್ದರು.