

ರಾಮನಗರ : ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಬಿಡಲಾಗಿದೆ ಎಂದು ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವಿ.ವೆಂಕಟೇಶ್ ತಿಳಿಸಿದರು.
ನಗರದ ನಗರಸಭೆಯ ಆವರಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೇವಾ ಖಾಯಮಾತಿ, ಸೇರಿ ವಿವಿಧ 21 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಮಂಗಳವಾರದಿಂದ ಜಿಲ್ಲೆ ಸೇರಿ ರಾಜ್ಯಾದಾದ್ಯಂತ ಪೌರ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದರು. ಶುಕ್ರವಾರ ತಡ ರಾತ್ರಿ ನಡೆದ ಸಭೆಯಲ್ಲಿ ಸರ್ಕಾರ ತಮ್ಮ ಬೇಡಿಕೆ ಈಡೇರಿಸಲು ಒಪ್ಪಿಗೆ ಸೂಚಿಸಿದೆ. ಹಾಗಾಗಿ ಕಳೆದ ನಾಲ್ಕು ದಿನದಿಂದ ನಡೆದ ಮುಷ್ಕರವನ್ನು ಬಿಡಲಾಗಿದೆ. ಜತೆಗೆ, ಶನಿವಾರ ಬೆಳಗ್ಗಿನಿಂದಲೇ ಪೌರ ಕಾರ್ಮಿಕರು ತಮ್ಮ ತಮ್ಮ ಕೆಲಸಕ್ಕೆ ಹಾಜರಾಗಿದ್ದಾರೆ ಎಂದರು.
ಸರ್ಕಾರ ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಒಪ್ಪಿಗೆ ಸೂಚಿಸುತ್ತಿದ್ದಂತೆ ಶನಿವಾರ ಪೌರ ಕಾರ್ಮಿಕರು ಸಿಹಿ ಹಂಚಿ, ಸಂಭ್ರಮಾಚರಣೆ ಮಾಡಿದರು.
ನಗರಸಭೆ ಉಪಾಧ್ಯಕ್ಷೆ ಆಯೀಷಾ ಭಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಮುಖಂಡರಾದ ಮಾವಿನ ಸಸಿ ವೆಂಕಟೇಶ್, ಮಂಜು ಸೇರಿ ಪೌರ ಕಾರ್ಮಿಕರು ಇದ್ದರು.