

ಬೆಂಗಳೂರು: ನಗರದ ಚರ್ಚ್ ಸ್ಟ್ರೀಟ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಅಕ್ರಮವಾಗಿ ಮಾಡಿಕೊಂಡಿದ್ದ ಒತ್ತುವರಿ ಜಾಗವನ್ನು ಶುಕ್ರವಾರ ತೆರವು ಮಾಡಲಾಯಿತು.
ಪೊಲೀಸ್ ಸಿಬ್ಬಂದಿ, ಪಾಲಿಕೆ ಅಧಿಕಾರಿಗಳು, ಮಾರ್ಷಲ್ ಸಹಯೋಗದಲ್ಲಿ ಚರ್ಚ್ಸ್ಟ್ರೀಟ್ ರಸ್ತೆಯ ಎರಡು ಬದಿ ಪಾದಚಾರಿ ಮಾರ್ಗದಲ್ಲಿದ್ದ 50 ಅಂಗಡಿ, ಮಳಿಗೆಯನ್ನು ತೆರವುಗೊಳಿಸಲಾಯಿತು. ತೆರವು ಕಾರ್ಯಾಚರಣೆ ವೇಳೆ 20 ಅಧಿಕ ಗ್ಯಾಂಗ್ ಮ್ಯಾನ್, 2 ಟಿಪ್ಪರ್, 6 ಟ್ರ್ಯಾಕ್ಟರ್ ಮೂಲಕ ಪಾದಚಾರಿ ಮಾರ್ಗದಲ್ಲಿಟ್ಟಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಯಿತು. ಮತ್ತೊಮ್ಮೆ ಒತ್ತುವರಿ ಮಾಡದಂತೆ ಎಲ್ಲ ಮಳಿಗೆ ಮಾಲೀಕರಿಗೆ ಪೂರ್ವ ವಲಯ ಆಯುಕ್ತ ಸ್ನೇಹಲ್ ಎಚ್ಚರಿಕೆ ನೀಡಿದರು.
ಸಾಕಷ್ಟು ಬಾರಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರೂ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದರು.ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿತ್ತು. ಪಾದಚಾರಿ ಮಾರ್ಗದಲ್ಲಿ ಆಹಾರ ತಯಾರಿಸುವುದರಿಂದ ಆರೋಗ್ಯ ಮತ್ತು ನೈರ್ಮಲ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ತೆರೆದ ಜಾಗದಲ್ಲಿ ಸಿಲಿಂಡರ್ ಬಳಸುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಪೂರ್ವ ವಲಯ ವ್ಯಾಪ್ತಿಯ ಇತರೆ ಕಡೆಗಳಲ್ಲೂ ಪರಿಣಾಮಕಾರಿಯಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಸ್ನೇಹಲ್ ಹೇಳಿದರು. ಜಂಟಿ ಆಯುಕ್ತೆ ಸರೋಜಾ, ಕಾರ್ಯಪಾಲಕ ಅಭಿಯಂತರ ಮುನಿರೆಡ್ಡಿ ಸೇರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕಗ್ಗದಾಸಪುರ ಕೆರೆ ಒತ್ತುವರಿ ತೆರವು: ಪೂರ್ವ ವಲಯದಲ್ಲಿ ಒತ್ತುವರಿ ಮಾಡಿಕೊಂಡಿದ್ದ ಕಗ್ಗದಾಸಪುರ ಕೆರೆ ಜಾಗವನ್ನು ಬಿಬಿಎಂಪಿ ತೆರವುಗೊಳಿಸಿ ತಂತಿ ಬೇಲಿ ಅಳವಡಿಸಿದೆ. ಕಂದಾಯ ಇಲಾಖೆಯು ಸರ್ವೇ ನಡೆಸಿದ ಬಳಿಕ ಬಿಬಿಎಂಪಿ ಕೆರೆಗಳ ವಿಭಾಗದ ಕಾರ್ಯಪಾಲಕ ಅಭಿಯಂತರ, ಸಹಾಯಕ ಕಾರ್ಯಪಾಲಕ ಅಭಿಯಂತರರು ಒಟ್ಟು ಕೆರೆ ವಿಸ್ತೀರ್ಣದ 3 ಎಕರೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ ತೆರವುಗೊಳಿಸಿದ್ದಾರೆ. ಒತ್ತುವರಿ ಪ್ರದೇಶ ಮೌಲ್ಯ 2 ಕೋಟಿ ಎಂದು ಅಂದಾಜಿಸಲಾಗಿದೆ. ಬಿಬಿಎಂಪಿ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಮಾತನಾಡಿ,ಪಾಲಿಕೆ ವಶದಲ್ಲಿ ನಿರ್ವಹಣೆ ಮಾಡಲಾಗುತ್ತಿರುವ ಕೆರೆಗಳನ್ನು ಶನಿವಾರ(ಅ.5)ದಿಂದ ಮುಂದಿನ ಒಂದು ವಾರ ಕಾಲ ಸ್ವಚ್ಚತಾ ಅಭಿಯಾನ ನಡೆಯಲಿದೆ.ಕಾರ್ಮಿಕರು,ಯಂತ್ರೋಪಕರಣ ಬಳಸಿಕೊಂಡು ನಿರ್ವಹಣೆ ಮಾಡಲಾಗುತ್ತದೆ. ಕೆರೆಗಳ ಒಳಹರಿವು, ಹೊರ ಹರಿವಿನ ಸ್ವಚ್ಚತೆ, ಹೂಳು ತೆಗೆಯುವುದು, ಗಿಡಗಂಟೆ, ಪಾದಚಾರಿ ಮಾರ್ಗಗಳಲ್ಲಿ ಪ್ಲಾಸ್ಟಿಕ್ ಸೇರಿ ಅನುಪಯುಕ್ತ ವಸ್ತುವನ್ನು ಸ್ವಚ್ಛಗೊಳಿಸಲಾಗುತ್ತದೆ.ಕೆರೆ ನೀರಿನ ಭಾಗದಲ್ಲಿ ಬೆಳೆದಿರುವ ಕಳೆಯನ್ನೂ ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.