

ಸುಬ್ರಹ್ಮಣ್ಯ: ದೇಶದ ಸಂಸ್ಕೃತಿ ಮತ್ತು ಕಲೆಯ ಉನ್ನತಿಗೆ ಕುಕ್ಕೆ ದೇವಳದಿಂದ ಅನವರತ ಪ್ರೋತ್ಸಾಹ ದೊರಕುತ್ತಿದೆ. ಅನೇಕ ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಕಿರುಷಷ್ಠಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸಿದ್ಧ ಕಲಾವಿದರಿಗೆ ವೇದಿಕೆ ಒದಗಿಸಿವೆ. ಗ್ರಾಮೀಣ ಕಲಾಸಕ್ತರಿಗೆ ಕಲೆಯ ಆಸ್ವಾದಕ್ಕೆ ದೇವಳದ ವತಿಯಿಂದ ವಿಶೇಷ ಅವಕಾಶ ಒದಗಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ.ಭಾರತೀಯ ಕಲಾ ಪ್ರಕಾರಗಳತ್ತ ಆಧುನಿಕ ಜನತೆ ಹೆಚ್ಚು ಆಕರ್ಷಿತರಾಗಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ದೇವಳದ ಕಿರುಷಷ್ಠಿ ಸಾಂಸ್ಕೃತಿಕ ವೇದಿಕೆಯಲ್ಲಿ 4 ದಿನಗಳ ಕಾಲ ನಡೆಯುವ ಕಿರುಷಷ್ಠಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗುರುವಾರ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸುಬ್ರಹ್ಮಣ್ಯ ಜ್ಞಾನದ ಅಧಿಪತಿ. ಸಂಗೀತ ಮತ್ತು ಕಲಾಪ್ರಿಯ.ಆಲಯಗಳಿಗೆ ನಾವುಗಳು ಹೃದಯಾಂತರಾಳದ ಭಕ್ತಿಯಿಂದ ಹೋಗಬೇಕು. ಸರ್ವರೂ ಭಗವಂತನಿಗೆ ಶರಣಾಗುವ ದೃಷ್ಟಿಯಿಂದ ದೇವಾಲಯಗಳಿಗೆ ಆಗಮಿಸಬೇಕು. ಅಂತರಂಗದಲ್ಲಿ ಭಗವಂತನನ್ನು ಕಾಣುವುದೇ ಧರ್ಮ. ಸಮಾಜವನ್ನು ಪೋಷಿಸುವುದು ಧರ್ಮ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಹಾಗೂ ವಾಗ್ಮಿ ಲಕ್ಷ್ಮೀಶ ಗಬಲಡ್ಕ ಧಾರ್ಮಿಕ ಉಪನ್ಯಾಸದಲ್ಲಿ ಹೇಳಿದರು.
ಎಸಿ ಜುಬಿನ್ ಮೊಹಾಪಾತ್ರ ಮಾತನಾಡಿದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ, ಸುಬ್ರಹ್ಮಣ್ಯ ಗ್ರಾಪಂ ಅಧ್ಯಕ್ಷೆ ಸುಜಾತಾ ಕಲ್ಲಾಜೆ ಮುಖ್ಯ ಅತಿಥಿಗಳಾಗಿದ್ದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸ್ಥಳೀಯ ಸದಸ್ಯರಾದ ಸತೀಶ್ ಕೂಜುಗೋಡು, ಅಚ್ಚುತ್ತ ಗೌಡ ಬಳ್ಪ ಇದ್ದರು.
ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯ ಮತ್ತು ಪುರೋಹಿತ ಕುಮಾರ ಭಟ್ ವೇದಘೋಷ ಮಾಡಿದರು. ಅರವಿಂದ ಅಯ್ಯಪ್ಪ ಸುತಗುಂಡಿ ಸ್ವಾಗತಿಸಿದರು. ಅಭಿಯಂತ ಉದಯ ಕುಮಾರ್ ವಂದಿಸಿದರು.ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.
ಕಿರುಷಷ್ಠಿಯಲ್ಲಿ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ದೇವರ ಆರಾಧನೆ ಮಾಡುತ್ತೇವೆ. ಸರ್ವರ ಸಹಕಾರದಿಂದ ಚಂಪಾಷಷ್ಠಿ ಮಹೋತ್ಸವ ಭಕ್ತಿಪೂರ್ವಕವಾಗಿ ಯಶಸ್ವಿಯಾಗಿದೆ. ಅದೇ ರೀತಿ ಕಿರುಷಷ್ಠಿ ಕಾರ್ಯಕ್ರಮಗಳು ಯಶಸ್ಸಾಗಲು ಸರ್ವರ ಸಹಕಾರ ಬೇಕು.ಮನಸಿಗೆ ಆನಂದ ಮತ್ತು ಸಂತೋಷವನ್ನು ಕಲಾ ಪ್ರಕಾರಗಳನ್ನು ಸರ್ವರೂ ಬಂದು ಆಸ್ವಾಧಿಸಬೇಕು. - ಜುಬಿನ್ ಮೊಹಾಪಾತ್ರ ದೇವಳದ ಆಡಳಿತಾಧಿಕಾರಿ