ನಂದಿನಿ ಉತ್ಪನ್ನ ಬಳಸಿ ರೈತರನ್ನು ಪ್ರೋತ್ಸಾಹಿಸಿ

10krp-02
Published on

ಕೆ.ಆರ್.ಪೇಟೆ: ಯಾವುದೇ ಸಹಕಾರ ಸಂಘದ ಸದಸ್ಯರಾದವರು ನಿಮ್ಮ ಸಂಘದ ಸಮಗ್ರ ಚಿತ್ರಣವನ್ನು ತಿಳಿದಿರಬೇಕಾದುದು ಸಹಕಾರ ತತ್ವದ ಧ್ಯೇಯವಾಗಿದೆ ಎಂದು ಶಾಸಕ ಹಾಗೂ ಮನ್ಮುಲ್ ನಿರ್ದೇಶಕ ಎಚ್.ಟಿ.ಮಂಜು ತಿಳಿಸಿದರು.


ತಾಲೂಕಿನ ತಾಲೂಕಿನ ಶೀಳನೆರೆ ಹೋಬಳಿಯ ತಮ್ಮ ಸ್ವಗ್ರಾಮ ಹರಳಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ 2023-2024ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.


ಸಹಕಾರ ಸಂಘಗಳು ದೇಶದ ಬೆನ್ನೆಲುಬಾಗಿದ್ದು ಗ್ರಾಮೀಣ ಪ್ರದೇಶದ ರೈತರ ಮತ್ತು ಸದಸ್ಯರ ಆಶೋತ್ತರಗಳನ್ನು ಈಡೇರಿಸುತ್ತವೆ. ಸಹಕಾರ ಸಂಘದ ಸದ್ಯರಾದವರು ತಾವು ಪ್ರತಿನಿಧಿಸುವ ಸಂಘದ ಬಗ್ಗೆ ಕೂಲಂಕಷವಾದ ಮಾಹಿತಿಗಳನ್ನು ಅರಿತಿರಬೇಕಾದುದು ಅತೀ ಅವಶ್ಯಕವಾಗಿದೆ. ಸರ್ವ ಸದಸ್ಯರು ನಿಮಗೆ ಜವಾಬ್ದಾರಿ ನೀಡಿದ ನಂತರ ಸಂಘಗಳ ಆಗುಹೋಗುಗಳ, ಸಮಸ್ಯೆಗಳ ಆಳ, ಅಗಲ, ಪರಿಹಾರಗಳು, ಸರ್ಕಾರದಿಂದ ಸಂಘಕ್ಕೆ ದೊರೆಯುವ ಸೌಲಭ್ಯಗಳು, ಸಂಘದ ಸದಸ್ಯರಿಗೆ ವಾರ್ಷಿಕವಾಗಿ ಸಿಗುವ ಪ್ರತಿಫಲ ಮುಂತಾದುವುಗಳನ್ನು ತಿಳಿದಿರಬೇಕು. ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳು ಕಡಿಮೆ ಬೆಲೆ ದೊರೆಯುತ್ತವೆ. ಪ್ರತಿಯೊಬ್ಬರೂ ನಂದಿನಿ ಉತ್ಪನ್ನಗಳನ್ನು ಬಳಸಿದರೆ ಪರೋಕ್ಷವಾಗಿ ರೈತರಿಗೆ ಬೆಂಬಲ ನೀಡಿದಂತಾಗುತ್ತದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಬೆಲೆ ನೀಡಿ ರೈತರಿಂದ ಹಾಲು ಖರೀದಿ ಮಾಡಲಾಗುತ್ತಿದೆ. ರೈತರು ತಮ್ಮ ರಾಸುಗಳಿಗೆ ಕಡ್ಡಾಯವಾಗಿ ಜೀವವಿಮೆ ಮಾಡಿಸಬೇಕು. ರೈತರಿಗಾಗಿ ರೈತ ಕಲ್ಯಾಣ ಟ್ರಸ್ಟ್ ಅಡಿಯಲ್ಲಿ 1 ಲಕ್ಷ ರೂ.ವರೆಗೆ ಜೀವ ವಿಮೆ ಸೌಲಭ್ಯವಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.


ವಾರ್ಷಿಕ ಮಹಾಸಭೆಯಲ್ಲಿ ಮಾರ್ಗ ವಿಸ್ತರಣಾಧಿಕಾರಿ ನಾಗಪ್ಪ ಅಲ್ಲಿಬಾದಿ ಸಂಘದ ಆಯವ್ಯಯ ಮಂಡಿಸಿದರು. ಸಂಘದ ಉಪಾಧ್ಯಕ್ಷೆ ಅನುರತಿ, ನಿರ್ದೇಶಕರಾದ ಎಚ್.ಎಸ್.ಮಹೇಶ್, ಎಚ್.ಕೆ.ಶಿವರಾಮು, ಬಸವೇಗೌಡ, ಅಹಮದ್ ಪಾಷ, ಲೋಕೇಶ, ವಿಶ್ವನಾಥ್, ದಿಲೀಪ್, ಛಾಯಾದೇವಿ, ಶಾಸಕರ ಆಪ್ತ ಸಹಾಯಕ ಪ್ರತಾಪ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net