

ಸಾಗರ: ಅಂಗವಿಕಲ ಮಕ್ಕಳಲ್ಲಿರುವ ಬೌದ್ಧಿಕ ಶಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಭವಿಷ್ಯದಲ್ಲಿ ಅವರು ಉತ್ತಮ ಸಾಧನೆ ಮಾಡುತ್ತಾರೆ ಎಂದು ಉಪವಿಭಾಗಾಧಿಕಾರಿ ಆರ್.ಯತೀಶ್ ಹೇಳಿದರು
ಚೈತನ್ಯ ವಿಶೇಷ ಶಿಕ್ಷಣ ಸಂಸ್ಥೆ ಮಕ್ಕಳು ದೇಹಾದಾರ್ಢ್ಯ ಸ್ಪರ್ಧೆಯಲ್ಲಿ ಪದಕ ಗಳಿಸಿರುವ ಹಿನ್ನೆಲೆಯಲ್ಲಿ ತಾಲೂಕಿನ ಭೀಮನಕೋಣೆಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಬೌದ್ಧಿಕ ನ್ಯೂನತೆಯುಳ್ಳ ಮಕ್ಕಳ ಸೇವೆ ಮಾಡುವ ಪುಣ್ಯದ ಕೆಲಸ ಸಿಕ್ಕಿದೆ ಎಂದು ಪಾಲಕರು ಖುಷಿಪಡಬೇಕು. ಅದನ್ನು ಬಿಟ್ಟು ಮಕ್ಕಳನ್ನು ನೋಡಿ ಕೊರಗುತ್ತ ಕುಳಿತರೆ ಗಮನಾರ್ಹ ಫಲಿತಾಂಶ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಇಂತಹ ಶಾಲೆಗಳನ್ನು ನಡೆಸುವುದು ಪುಣ್ಯದ ಕೆಲಸ ಎಂದರು.
ಬೆಂಗಳೂರು ಸೇರಿದಂತೆ ದೊಡ್ಡದೊಡ್ಡ ನಗರಗಳಲ್ಲಿ ಇಂತಹ ವಿದ್ಯಾಸಂಸ್ಥೆಗಳಿದ್ದರೂ ಅವುಗಳು ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಆದರೆ ಭೀಮನಕೋಣೆ ಚೈತನ್ಯ ವಿಶೇಷ ಮಕ್ಕಳ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಮಕ್ಕಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಲಾಗಿದೆ. ಇಂತಹ ಸಂಸ್ಥೆಗೆ ತಾಲೂಕು ಮತ್ತು ಜಿಲ್ಲಾಡಳಿತದಿಂದ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು.
ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಎರಡು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಪಡೆದ ಲೀಲಾವತಿ ಮತ್ತು ವೈಭವಿ, ತರಬೇತುದಾರರಾದ ಉಮೇಶ್, ಆದರ್ಶ, ಜಾನಕಿ ಅವರನ್ನು ಅಭಿನಂದಿಸಲಾಯಿತು.
ಸಂಸ್ಥೆಯ ಟ್ರಸ್ಟಿ ಬಿ.ಎಚ್.ರಾಘವೇಂದ್ರ, ಸುರೇಶ್, ಜಯಶ್ರೀ ಇದ್ದರು. ಗಾನವೈಭವ ತಂಡದ ಸದಸ್ಯರು ಪ್ರಾರ್ಥಿಸಿದರು. ಎಂ.ನಾಗರಾಜ್ ಸ್ವಾಗತಿಸಿದರು. ಸಂಸ್ಥೆ ಮುಖ್ಯಸ್ಥೆ ಶಾಂತಲಾ ಪ್ರಾಸ್ತಾವಿಕ ಮಾತನಾಡಿದರು.