ಕುಸ್ತಿ ಪಂದ್ಯ ಪ್ರೋತ್ಸಾಹಿಸಿ, ಬೆಳೆಸಿ

SRP_06-03jpj
Published on

ಶ್ರೀರಂಗಪಟ್ಟಣ: ಕುಸ್ತಿ ಪಂದ್ಯವನ್ನು ಪ್ರತಿಯೊಬ್ಬರೂ ಪ್ರೋತ್ಸಾಹಿಸಿ, ಬೆಳೆಸಿ ಉಳಿಸಿ ಎಂದು ಸೆಸ್ಕ್ ಅಧ್ಯಕ್ಷ ಹಾಗೂ ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಸಲಹೆ ನೀಡಿದರು.


2024ರ ಶ್ರೀರಂಗಪಟ್ಟಣ ದಸರಾ ಪ್ರಯುಕ್ತ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಯುವಜನ ಕ್ರೀಡಾ ಇಲಾಖೆ ಹಾಗೂ ಅಮೆಚೂರ್ ಕುಸ್ತಿ ಸಂಘ, ಜಿಲ್ಲಾ ಮಹಿಳಾ ಕುಸ್ತಿ ಸಂಘ ಮತ್ತು ಭಾರತೀಯ ಶೈಲಿ ಕುಸ್ತಿ ಸಂಘದ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.


ಗ್ರಾಮೀಣ ಪ್ರದೇಶದ ರೈತಾಪಿ ಜನರಿಗೆ ಕುಸ್ತಿ ಜನಪ್ರಿಯ ದೇಸಿ ಕ್ರೀಡೆಯಾಗಿದೆ. ಹಿಂದೆ ಪ್ರತಿಯೊಂದು ಊರಿನಲ್ಲೂ ಗರಡಿ ಮನೆಗಳಿದ್ದವು, ಅವು ಇಂದು ಮರೆಯಾಗುತ್ತಿವೆ. ಸಾಧನೆ ಪರಂಪರೆ, ಪೈಲ್ವಾನ್ ಸಂಸ್ಕೃತಿ ಜೀವಂತವಾಗಿಸುವ ಕೆಲಸ ಎಲ್ಲರಿಂದಲೂ ಆಗಬೇಕಿದ್ದು, ಪ್ರತಿ ವರ್ಷವೂ ದಸರಾ ಆಚರಣೆಯಲ್ಲಿ ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸಲಾಗುತ್ತಿದೆ. ಶ್ರೀರಂಗಪಟ್ಟಣದಲ್ಲಿ ಇಂದಿಗೂ ಗರಡಿಗಳು ಅಸ್ತಿತ್ವದಲ್ಲಿದ್ದು, ಕುಸ್ತಿ ಪಟುಗಳು ಇಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇಲ್ಲಿನ ಪೈಲ್ವಾನ್‌ಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿಜೇತರಾಗಿದ್ದಾರೆ. ಅವರಿಗೆ ದಸರಾ ಸಂದರ್ಭದಲ್ಲಿ ಅಭಿನಂದಿಸಿ ಪುರಸ್ಕರಿಸಲಾಗುತ್ತದೆ ಎಂದರು.


ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಶ್ರೀರಂಗಪಟ್ಟಣ ದಸರಾ ಉತ್ಸವ ಅ.4ರಿಂದ ಅರ್ಥಪೂರ್ಣದೊಂದಿಗೆ ವೈಭವಯುತವಾಗಿ ಆಚರಿಸಲಾಗುತ್ತಿದೆ. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಶಾಸಕರ ನೇತೃತ್ವದಲ್ಲಿ ದೇಸಿ ಕ್ರೀಡಾಕೂಟ ಕುಸ್ತಿ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ ಎಂದರು.


ಕುಸ್ತಿ ಪಂದ್ಯಾವಳಿಯಲ್ಲಿ ಬೆಳಗಾವಿ, ಬೆಂಗಳೂರು, ರಾಮನಗರ, ಶಿವಮೊಗ್ಗ, ತುಮಕೂರು, ಮೈಸೂರು ಇತರ ಜಿಲ್ಲೆಗಳು ಸೇರಿದಂತೆ ಮಂಡ್ಯ ಜಿಲ್ಲೆಯ ವಿವಿಧ ತಾಲೂಕುಗಳ ಸುಮಾರು 65 ಜೊತೆ 130 ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದು, ಕೆಮ್ಮಣ್ಣಿನ ಮಟ್ಟಿಯ ಅಖಾಡದ ಮೇಲೆ ಎದುರಾಳಿಯ ವಿರುದ್ಧ ನಿಂತು ತೊಡೆ ತಟ್ಟಿದ ಪೈಲ್ವಾನರು, ತಮ್ಮ ವಿವಿಧ ಪಟ್ಟುಗಳನ್ನು ಪ್ರದರ್ಶಿಸಿ ಗೆಲುವಿಗೆ ಸೆಣಸಾಡಿದರು.
ಈ ವೇಳೆ ಮೈದಾನದಲ್ಲಿ ಕಿಕ್ಕಿರಿದು ನೆರೆದಿದ್ದ ಕ್ರೀಡಾ ಪ್ರೇಕ್ಷಕರು ಶಿಳ್ಳೆ, ಕೇಕೆ ಹಾಕಿ ಹರ್ಷೋದ್ಗಾರಗಳಿಂದ ಪ್ರೋತ್ಸಾಹಿಸಿ ಹುರಿದುಂಬಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 20 ಮಂದಿ ಅನುಭವಿ ತೀರ್ಪುಗಾರರು ಆಗಮಿಸಿದ್ದು, ಕ್ರೀಡೆಯಲ್ಲಿ ಪಾರದರ್ಶಕ ನಿರ್ಣಯ ತೋರಿದರು.


ಯಾವಾಗಲೂ ಪುರುಷರ ವಿಭಾಗಕ್ಕೆ ಮಾತ್ರ ನಡೆಸುತ್ತಿದ್ದ ಮಾರ್ಪಿಟ್ ಕುಸ್ತಿಯನ್ನು ಇದೇ ಪ್ರಥಮ ಬಾರಿಗೆ ಶ್ರೀರಂಗಪಟ್ಟಣ ದಸರಾ ಅಖಾಡದಲ್ಲಿ ಮಹಿಳೆಯರ ಮಾರ್ಪಿಟ್ ಕುಸ್ತಿ ಸ್ಪರ್ಧೆ ಆಯೋಜಿಸಿದ್ದು, ಈ ಬಾರಿ ಮಹಿಳಾ ಪಟುಗಳು ಎದುರಾಳಿ ವಿರುದ್ಧ ಸೋಲು-ಗೆಲುವಿನ ಪಂದ್ಯಾವಳಿಯಲ್ಲಿ ರಣ ರೋಚಕ ಪ್ರದರ್ಶನ ನೀಡಿದರು.


ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಕುಸ್ತಿ ಪಂದ್ಯಾವಳಿ ಉಸ್ತುವಾರಿ ಮಲ್ಲುಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net