

ಬೆಂಗಳೂರು: 'ನನ್ನ ಹೆಂಡತಿ ಮೊಬೈಲ್ಗೆ ಯಾಕಪ್ಪಾ ಫೋನ್ ಮಾಡ್ತೀಯಾ?' ಎಂದು ಪ್ರಶ್ನಿಸಿದ ಸ್ನೇಹಿತನ್ನು ಮನೆಗೆ ಕರೆಸಿಕೊಂಡ ದುಷ್ಕರ್ಮಿ, ಆತನನ್ನು ಬರ್ಬರವಾಗಿ ಕೊಂದು ಮೂಟೆಕಟ್ಟಿ ಕಾಂಪೌಂಡ್ ಬಳಿಯೇ ಎಸೆದು ಹೋದ ಭೀಕರ ಘಟನೆ ರಾಜ್ಯ ರಾಜಧಾನಿಯಲ್ಲಿ ಸಂಭವಿಸಿದೆ.
ಅಂದ್ರಹಳ್ಳಿಯ ಪ್ರಸನ್ನ ಬಡಾವಣೆಯ ನಿವಾಸಿ ಕೇದಾರ್ ಸಹಾನಿ ಕೊಲೆಯಾದ ದುರ್ದೈವಿ. ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಕೇದಾರ್ ಮತ್ತು ರಾಹುಲ್ ಅಲಿಯಾಸ್ ಚೋಟಾ ಲಾಲ್ ಇಬ್ಬರೂ ಸ್ನೇಹಿತರು. ಕೇದಾರ್ ಪತ್ನಿ ಕುಸುಮಾ ಮೊಬೈಲ್ಗೆ ರಾಹುಲ್ ಕರೆ ಮಾಡುತ್ತಿದ್ದ. ಇದನ್ನು ಪ್ರಶ್ನಿಸಿದ್ದ ಕೇದಾರ್, ಸ್ನೇಹಿತನೊಂದಿಗೆ ಜಗಳ ಮಾಡಿದ್ದ. ಇದೇ ವಿಚಾರವಾಗಿ ಮಾತನಾಡುವ ಬಾ ಎಂದು ಸೆ.5ರ ರಾತ್ರಿ ಎನ್ಕ್ಲೇವ್ ಅಪಾರ್ಟ್ಮೆಂಟ್ಗೆ ಸ್ನೇಹಿತನನ್ನು ರಾಹುಲ್ ಕರೆಸಿಕೊಂಡಿದ್ದ.
ಎನ್ಕ್ಲೇವ್ ಅಪಾರ್ಟ್ಮೆಂಟ್ನ ರಾಹುಲ್ ಮನೆಗೆ ಹೋದ ಕೇದಾರ್ಗೆ ಕಂಠಪೂರ್ತಿ ಎಣ್ಣೆ ಕುಡಿಸಿ ಸಿಲಿಂಡರ್ನಿಂದ ತಲೆ ಜಜ್ಜಿದ್ದ ಕೊಂದಿದ್ದ. ಕೃತ್ಯ ಎಸಗಿ ಮೃತದೇಹವನ್ನು ಅದೇ ಅಪಾರ್ಟ್ಮೆಂಟ್ನ ಒಳಗೆ ಮೂಟೆಕಟ್ಟಿ ಎಸೆದು ಬಿಹಾರಕ್ಕೆ ಎಸ್ಕೇಪ್ ಆಗಿದ್ದ.
ತನಿಖೆ ಕೈಗೊಂಡ ಬ್ಯಾಡರಹಳ್ಳಿ ಇನ್ಸ್ಪೆಕ್ಟರ್ ರಾಜೀವ್ ನೇತೃತ್ವದ ತಂಡ ಬಿಹಾರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ರಾಹುಲ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.