

ಕೂಡ್ಲಿಗಿ: ಜಾತ್ರೆ ಎಂದರೆ ಪಟ್ಟಣದಲ್ಲಿ ಸದ್ದು ಗದ್ದಲ, ಸಂಭ್ರಮ ಮನೆ ಮಾಡಿರುತ್ತದೆ. ಆದರೆ, ಈ ಕೂಡ್ಲಿಗಿಯ ಪಟ್ಟಣ ಗುಳೆ ಲಕ್ಕಮ್ಮ ಜಾತ್ರೆಯ ದಿನ ಬೆಳಗ್ಗೆಯಿಂದ ಸಂಜೆಯ ವರೆಗೆ ಯಾರೊಬ್ಬರು ಕಾಣುವುದಿಲ್ಲ. ಎಲ್ಲ ಮನೆಗೆ ಬೀಗ ಹಾಕಿರುತ್ತಾರೆ. ನೀರವ ಮೌನ ಆವರಿಸಿರುತ್ತದೆ. ಜಾಗತಿಕ ಯುಗದಲ್ಲೂ ಕೂಡ್ಲಿಗಿಯಲ್ಲಿ ಇಂಥ ಪದ್ಧತಿ ಆಚರಿಸಲಾಗುತ್ತದೆ. ಮನೆಯ ಬೀಗ ಹಾಕಿ ಊರ ಹೊರಗೆ ನಡೆಯುವ ಜಾತ್ರೆಗೆ ಹೋಗುತ್ತಾರೆ. ಗ್ರಾಮದಲ್ಲಿ ಯಾರೂ ಇರುವಂತಿಲ್ಲ.
ಇದನ್ನೂ ಓದಿ:ಮುದಗಲ್ನಲ್ಲಿ ದುರ್ಗಾದೇವಿ ಜಾತ್ರೆ ಅದ್ದೂರಿ
ಏ.23ರಂದು ಗುಳೆ ಲಕ್ಕಮ್ಮ ಜಾತ್ರೆ ನಡೆಯಲಿದೆ. ಮಂಗಳವಾರ ರಾತ್ರಿ ಪಟ್ಟಣದ ಊರಮ್ಮ ಬಯಲಿನಲ್ಲಿರುವ ಗುಳೆ ಲಕ್ಕಮ್ಮನ ಕಟ್ಟೆ ಮೇಲೆ ದೇವಿಯನ್ನು ಮೂರ್ತಿಯನ್ನು ಪ್ರತಿಷ್ಠಾಪಿಸಿ. ಜಾತ್ರೆ ದಿನ ಬೆಳಗ್ಗೆ 3 ಗಂಟೆಯಿಂದ ಮಹಿಳೆಯರು ದೇವಿಗೆ ಉಡಿ ತುಂಬಲಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಎಲ್ಲರೂ ಮನೆ ಖಾಲಿ ಮಾಡಲಿದ್ದಾರೆ. ನಂತರ ಸಕಲ ವಾದ್ಯಮೇಳದೊಂದಿಗೆ ಗುಳೆ ಲಕ್ಕಮ್ಮ ದೇವಿ ಊರಿನಲ್ಲಿ ಒಂದು ಸುತ್ತು ಹಾಕಲಿದ್ದಾಳೆ. ಯಾರಾದರೂ ಮನೆ ಬಾಗಿಲನ್ನು ತೆರೆದಿದ್ದರೆ ಅಂಥವರನ್ನು ಮನೆಯಿಂದ ಹೊರಹಾಕಿ ಮನೆಗೆ ಬೀಗ ಹಾಕಲಾಗುತ್ತದೆ. ಈ ಸಮಯದಲ್ಲಿ ಪಟ್ಟಣದ ತಳವಾರ ಕಾವಲಿರುತ್ತಾನೆ. ಯಾರೂ ಇಲ್ಲ ಎಂಬುದು ಖಚಿತವಾದ ನಂತರ ಪಟ್ಟಣ ಬಾಗಿಲಿಗೆ ಪಾರಿ ಬೇಲಿಯನ್ನು ಹಾಕಲಾಗುತ್ತದೆ.
ಬಾಣಂತಿ, ಮಕ್ಕಳು ಸೇರಿ ಮನೆ ಮಂದಿ ಎಲ್ಲ ಸಾಕು ಪ್ರಾಣಿಗಳೊಂದಿಗೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಮನೆ ಖಾಲಿ ಮಾಡುವರು. ಹೀಗೆ ಗುಳೆ ಹೊರಟ ಜನ ಪಟ್ಟಣದ ಹೊರಗಿನ ತೋಟಗಳಲ್ಲಿ ಅಥವಾ ಅನುಕೂಲವಾದ ಸ್ಥಳಗಳಲ್ಲಿ ವ್ಸ್ತಾವ್ಯ ಹೂಡಲಿದ್ದಾರೆ. ಸುತ್ತಮುತ್ತಲಿನ ಊರಿನ ಜನರು, ಸಂಬಂಧಿಕರು ಜಾತ್ರೆಗೆ ಬರಲಿದ್ದಾರೆ.
ಲಕ್ಕಮ್ಮ ಊರ ಹೊರಗೆ ಹೋಗುವಾಗ ಊರಿನ ಆಯಾಗಾರರ ಮನೆಯವರು ದೇವಿ ಜತೆಗೆ ಅಗತ್ಯ ವಸ್ತುಗಳನ್ನು ಕಟ್ಟಿಕೊಂಡ ಪುಟ್ಟಿಯನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುಲಿದ್ದಾರೆ. ದೇವಿ ಸಾಗುವ ದಾರಿಯುದ್ದಕ್ಕೂ ಭಕ್ತರು ಹರಕೆ, ಹಣ್ಣು, ಕಾಯಿಗಳನ್ನು ದೇವಿಗೆ ಅರ್ಪಿಸುವರು. ಊರಮ್ಮನ ಬಾವಿಯ ಹಾದಿಯಲ್ಲಿ ಹೊರಟು ಊರ ಹೊರಗೆ ಹಾಕಿರುವ ಪೌಳಿಗಳಲ್ಲಿ ಹಾದು ಗೋವಿಂದಗಿರಿ ಬಳಿಯ ಆಲದ ಮರದ ಕೆಳಗೆ ಗುಳೆ ಲಕ್ಕಮ್ಮ ದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ನಂತರ ಗೋವಿಂದಗಿರಿ ಗ್ರಾಮದ ಭಕ್ತರು ಹರಕೆ ಸಲ್ಲಿಸುವರು. ನಂತರ ದೇವಿಗೆ ಬಂದ ಅಕ್ಕಿ, ಬೇಳೆ, ಬೆಲ್ಲ ಇತರೆ ಪದಾರ್ಥಗಳನ್ನು ಅಯಾಗಾರರು ಹಂಚಿಕೊಳ್ಳಲಿದ್ದಾರೆ.
ಮತ್ತೆ ಗೋಧೂಳಿ ಸಮಯಕ್ಕೆ ದೇವಿಯನ್ನು ಪಟ್ಟಣಕ್ಕೆ ಕರೆ ತರಲಿದ್ದಾರೆ. ಬರುವಾಗ ಗುಳೆ ಹೋದ ಜನರೆಲ್ಲ ದೇವಿಯ ಹಿಂದೆ ಬರಲಿದ್ದಾರೆ. ಇದಕ್ಕೂ ಮುನ್ನ ಊರ ಬಾಗಿಲ ಬಳಿ ಸಗಣಿ ಕುಳ್ಳಿನಲ್ಲಿ ಬೆಂಕಿ ಹಾಕಲಾಗುತ್ತದೆ. ಗ್ರಾಮಸ್ಥರು ಕುಳ್ಳಿನ ಬೆಂಕಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಅದರಿಂದ ದೀಪ ಬೆಳಗಿ ಬಾಗಿಲ ಬಳಿ ತೆಂಗಿನ ಕಾಯಿ ಹೊಡೆದು ಮನೆ ಸೇರಲಿದ್ದಾರೆ.
ಹಿನ್ನೆಲೆ: ಹಿಂದೆ ಕಾಲರ, ಪ್ಲೇಗ್ ಇತ್ಯಾದಿ ಸಾಂಕ್ರಾಮಿಕ ರೋಗಗಳು ಇಡೀ ಊರನ್ನು ವ್ಯಾಪಿಸಿ ಸಾವು-ನೋವಿಗೆ ಕಾರಣವಾಗುತ್ತಿದ್ದವು. ಆಗ ಜನರು ಗುಳೇ ಹೋಗುತ್ತಿದ್ದರು. ರೋಗ ನಿಯಂತ್ರಣಕ್ಕೆ ಬಂದ ನಂತರ ಊರಿಗೆ ಹಿಂದಿರುಗಿ ಸ್ವಚ್ಛಗೊಳಿಸಿ ಮತ್ತೆ ಬದುಕು ಸಾಗಿಸುತ್ತಿದ್ದರು. ಕಾಲಾನಂತರ ಜನ ಗುಳೆ ಹೋಗುವ ಅವಧಿಯನ್ನು ಸೀಮಿತಗೋಳಿಸಿ ಪೂರ್ವಜರ ಆಚರಣೆಗಳನ್ನು ಮುಂದುವರಿಸುತ್ತಿದ್ದಾರೆ. ಮೊದಲೆಲ್ಲಾ ವರ್ಷಕ್ಕೊಂದು ಒಂದು ಬಾರಿ ಆಚರಿಸಲಾಗುತ್ತಿತ್ತು. ಆದರೆ, ಇಂದು ಪಟ್ಟಣ ದೊಡ್ಡದಾಗಿದ್ದು, ನೀರು ನೆರಳಿನ ಅಭಾವದಿಂದ ಮೂರು ಅಥವಾ ಐದು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ ಎಂದು ಹಿರಿಯ ಮುಖಂಡ ಕೆ.ಎಚ್.ವೀರನಗೌಡ ತಿಳಿಸಿದ್ದಾರೆ.