ಅಸಮರ್ಪಕ ನೀರು ಪೂರೈಕೆ, ಮಹಿಳೆಯರಿಂದ ಪ್ರತಿಭಟನೆ

24KMT5
Published on

ಕುಮಟಾ: ತಾಲೂಕಿನ ಮಿರ್ಜಾನ ಪಂಚಾಯಿತಿ ವ್ಯಾಪ್ತಿಯ ಕಲ್ಮಟ್ಟೆಯಲ್ಲಿ ಸಮರ್ಪಕ ನೀರು ಪೂರೈಸುವಂತೆ ಮಹಿಳೆಯರು ಮಂಗಳವಾರ ಪಂಚಾಯಿತಿ ಎದುರು ಖಾಲಿ ಕೊಡ ಪ್ರದರ್ಶಿಸಿ ಆಗ್ರಹಿಸಿದರು.

ಕಲ್ಮಟ್ಟೆಯಲ್ಲಿ ಸುಮಾರು 40 ಕುಟುಂಬಗಳು ವಾಸಿಸುತ್ತಿದ್ದು ಪಂಚಾಯಿತಿಯಿಂದ ಪೂರೈಸುವ ನೀರನ್ನೇ ಅವಲಂಬಿಸಿದ್ದಾರೆ. ಈ ಭಾಗದಲ್ಲಿ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. 7 ದಿನಗಳಿಂದ ನೀರೇ ಬಿಟ್ಟಿಲ್ಲ. ಕಲ್ಮಟ್ಟೆಗೆ ದಿನಬಿಟ್ಟು ದಿನ ಒಂದು ತಾಸು ಮಾತ್ರ ನೀರು ಬಿಡಲಾಗುತ್ತದೆ. ಈ ನೀರು ಏತಕ್ಕೂ ಸಾಲುವುದಿಲ್ಲ. ಸಾಲದಕ್ಕೆ ವರ್ಷವಿಡೀ ಆಗಾಗ ಪಂಪು, ಪೈಪು ಕೆಟ್ಟಿದೆ ಎಂದು ವಾರಗಟ್ಟಲೇ ನೀರು ಬಿಡುವುದಿಲ್ಲ. ಜನ ಏನನ್ನು ಕುಡಿಯಬೇಕು ಕೂಡಲೇ ವ್ಯವಸ್ಥೆ ಸರಿಪಡಿಸಬೇಕು. ಪಂಪ್ ಮುಂತಾದವು ಹಾಳಾದರೆ ಸ್ಥಳೀಯ ದುರಸ್ತಿಗಾರರನ್ನೇ ಬಳಸಿ ತಕ್ಷಣ ಸರಿಪಡಿಸಬೇಕು. ಅನಗತ್ಯ ವಾರಗಟ್ಟಲೆ ನೀರು ಬಿಡದೇ ಸತಾಯಿಸಬಾರದು ಎಂದು ಮಹಿಳೆಯರು ಕೋರಿದರು.

ಪಿಡಿಒ ನಾಗಶ್ರೀ ಮುಕ್ರಿ ಪ್ರತಿಕ್ರಿಯಿಸಿ, ಮಿರ್ಜಾನ ಗ್ರಾಪಂನಲ್ಲಿ ನೀರು ವಿತರಿಸುವ ಎರಡು ಪಂಪುಗಳು ಏಕಕಾಲಕ್ಕೆ ಕೆಟ್ಟು ಹೋದ ಪರಿಣಾಮ ಈ ಸಮಸ್ಯೆ ಎದುರಾಗಿದೆ. ಬುಧವಾರ ಪಂಪ್ ರಿಪೇರಿಯಾಗಲಿದ್ದು ಅಂದು ಸಂಜೆಯ ವೇಳೆ ಎಲ್ಲರಿಗೂ ನೀರು ಪೂರೈಕೆಗೆ ಕ್ರಮ ಕೈಗೊಳ್ಳುತ್ತೇವೆ. ಸಮಸ್ಯೆಯ ಶಾಶ್ವತ ಪರಿಹಾರಕ್ಕೂ ಪ್ರಯತ್ನಿಸುತ್ತೇವೆ ಎಂದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net