

ಕಿಕ್ಕೇರಿ: ನೇಕಾರಿಕೆ ನಂಬಿದ ನೇಕಾರರ ಬದುಕು ಅನಿಶ್ಚಿತತೆಯಿಂದ ಕೂಡಿದ್ದು, ವಿದ್ಯೆಯನ್ನು ಶಕ್ತಿಯಾಗಿ ಬಳಸಿಕೊಂಡು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸಲಹೆ ನೀಡಿದರು.
ಪಟ್ಟಣದ ಕುರುಹಿನಶೆಟ್ಟಿ ಸಮುದಾಯ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಿದ್ದಾರೂಢಸ್ವಾಮಿ ವಿಶೇಷ ಪೂಜಾ ಮಹೋತ್ಸವದಲ್ಲಿ ಮಾತನಾಡಿದರು.
ನೇಕಾರಿಕೆ ನಂಬಿದ ಬಹುತೇಕರು ಸೂಕ್ತ ಮಾರುಕಟ್ಟೆ, ಕೆಲಸವಿಲ್ಲದೆ ವೃತ್ತಿಯಿಂದ ವಿಮುಖರಾಗುತ್ತಿರುವುದು ದುರದೃಷ್ಟಕರ. ವೃತ್ತಿಯಲ್ಲಿ ನೈಪುಣ್ಯ ಹೊಂದಿದ ನೇಕಾರರು ಬದುಕಿಗಾಗಿ ಬೇರೆ ವೃತ್ತಿ ಅವಲಂಬಿಸಬೇಕಿದೆ. ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಿ, ಬದುಕು ಕಟ್ಟಿಕೊಳ್ಳುವ ಕೆಲಸಕ್ಕೆ ಮುಂದಾಗಿ ಎಂದರು.
ಕೈಮಗ್ಗಕ್ಕೆ ಹೆಸರುವಾಸಿಯಾದ ಕುರುಹಿನಶೆಟ್ಟಿ ಜನಾಂಗದವರು ಗ್ರಾಮದಲ್ಲಿ ಪ್ರಧಾನವಾಗಿದ್ದರು. ಇಲ್ಲಿನ ಸೀರೆಗಳಿಗೆ ಬಲು ಬೇಡಿಕೆ ಇದ್ದು, ಹೊರ ಪ್ರದೇಶದಿಂದ ಖರೀದಿಸಲು ಗ್ರಾಹಕರು ಬರುತ್ತಿದ್ದರು ಎಂಬುದನ್ನು ತಿಳಿದಿರುವೆ. ಬೇಡಿಕೆ ಕಡಿಮೆಯಾದ ಕಾರಣ ಉದ್ಯೋಗವಿಲ್ಲದೆ ಅನ್ಯ ವೃತ್ತಿ ಅವಲಂಬಿಸಿದ್ದೀರಿ. ವಿಚಲಿತರಾಗುವುದು ಬೇಡ. ಸ್ವಯಂ ಉದ್ಯೋಗಕ್ಕೆ ಒತ್ತು ನೀಡಿ. ನಗರ ಪ್ರದೇಶಗಳಿಗೆ ವಲಸೆ ಹೋಗುವುದರಿಂದ ಮತ್ತಷ್ಟು ಸಂಕಷ್ಟ ಬದುಕು ಆಗಲಿದೆ ಎಂದು ತಿಳಿಸಿದರು.
ಅಧ್ಯಕ್ಷ ಸೂರ್ಯನಾರಾಯಣ, ಕಾರ್ಯದರ್ಶಿ ಡಿ.ಉಮೇಶ್, ಬ್ಲೂಬೆಲ್ ಇಂಟರ್‌ನ್ಯಾಷನಲ್ ಸ್ಕೂಲ್ ಕೆ.ವಿ.ಶ್ರೀನಿವಾಸಶೆಟ್ಟಿ, ಶಶಿ ಸಂಜೀವಿನಿ ಸೇವಾ ಟ್ರಸ್ಟ್‌ನ ಜಾವಾ ಕೆ.ಎಚ್.ಸಂಜೀವಶೆಟ್ಟಿ, ನಿವೃತ್ತ ಶಿಕ್ಷಕ ಸಂಜೀವಶೆಟ್ಟಿ, ಕೆ.ಜೆ.ರಾಮಶೆಟ್ಟಿ, ಮೈಕೋ ಶಿವರಾಮಶೆಟ್ಟಿ, ಗೋವಿಂದಶೆಟ್ಟಿ, ನಾಗರಾಜಶೆಟ್ಟಿ, ಕೆ.ಆರ್. ಪಾಂಡುರಂಗ, ಗ್ರಾಪಂ ಮಾಜಿ ಅಧ್ಯಕ್ಷೆ ಸುನೀತಾ ದಯಾನಂದ, ಗ್ರಾಮಸ್ಥರಾದ ಭಾರತಿ, ಗಿರಿಜಾ, ಲೀಲಾವತಿ, ಸಾವಿತ್ರಿ ಮತ್ತಿತರರಿದ್ದರು.