

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕೆ.ಜಿ.ಯಿಂದ ಪಿಜಿವರೆಗೆ ಗ್ರಾಮದ ಮಕ್ಕಳಿಗೆ ವ್ಯಾಸಂಗದ ಜತೆಗೆ ಇಲ್ಲಿನ ಕೈಗಾರಿಕಾ ಕೇಂದ್ರಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿ ಸ್ವಾವಲಂಬಿಗಳಾಗಿಸುವ ಕೆಲಸ ಗ್ರಾಪಂನಿಂದ ಮಾಡಲಾಗುತ್ತಿದೆ ಎಂದು ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಬೆಳಪು ಗ್ರಾಪಂ ಅಬ್ದುಲ್ ನಜೀರ್ ಸಾಬ್ ಸಭಾಭವನದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ವಿಶೇಷ ಗ್ರಾಮಸಭೆ, 2025-26ನೇ ಸಾಲಿನ ನರೇಗಾ ಯೋಜನೆಯ ಕ್ರಿಯಾ ಯೋಜನಾ ತಯಾರಿ, ಸರ್ಕಾರಿ ಜಾಗದಲ್ಲಿನ ಹಕ್ಕುಪತ್ರ ರಹಿತ ಬಡವರಿಗೆ ಮನೆ ನಂಬ್ರ ವಿತರಣೆ, ಪರಿಶಿಷ್ಟ ಜಾತಿ, ಪಂಗಡದವರಿಗೆ ವಿಶಿಷ್ಟ ಸವಲತ್ತು ವಿತರಣೆ ಮುಂತಾದ ಅಡಕ ವಿಷಯಗಳ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು.
ಬೆಳಪು ಸರ್ಕಾರಿ ಶಾಲೆಯಲ್ಲಿ 6ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದೆ ಕೆ.ಜಿ.ಯಿಂದ 10ನೇ ತರಗತಿವರಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಸರ್ಕಾರಿ ಮಟ್ಟದಲ್ಲಿ ಪ್ರಯತ್ನಿಸಲಾಗುವುದು. ಪಿಯು ಬಳಿಕ ಏನು ಎಂಬುದಕ್ಕುತ್ತರವಾಗಿ ಪಾಲಿಟೆಕ್ನಿಕ್ ಕೂಡ ನಮ್ಮಲ್ಲಿದೆ. ಮಲ್ಲಾರಿನಿಂದ ಸ್ಥಳಾಂತರಗೊಂಡು ಇಲ್ಲಿ ಸ್ಥಾಪಿಸಲ್ಪಡುವ ಮೌಲಾನ ಆಜಾದ್ ವಸತಿ ಶಾಲೆ ಸೇರಿದಂತೆ ವಿಜ್ಞಾನ ಸಂಶೋಧನಾ ಕೇಂದ್ರಗಳು ವಿದ್ಯಾರ್ಥಿಗಳಿಗೆ ವರದಾನವಾಗಲಿದೆ. ಹಾಗಾಗಿ ಬೆಳಪು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಬ್ ಆಗಿ ಪರಿವರ್ತನೆಯಾಗಲಿರುವುದು ಎಂದು ತಿಳಿಸಿದರು.
ಪರಿಶಿಷ್ಟ ಪಂಗಡಗಳ 13 ಮಂದಿ, 5 ಅಂಗನವಾಡಿ ಕೇಂದ್ರಗಳಿಗೆ ನೀರಿನ ಟ್ಯಾಂಕ್, ಪರಿಶಿಷ್ಟ ಪಂಗಡ ಹಾಗೂ ವರ್ಗದ ಜನರಿಗೆ 96 ಕಸದ ಬಾಕ್ಸ್ ವಿತರಿಸಲಾಯಿತು. ಮಾರ್ಗದರ್ಶಿ ಅಧಿಕಾರಿ ಶುಭಾ, ಗ್ರಾಪಂ ಉಪಾಧ್ಯಕ್ಷೆ ಶೋಭಾ ವಿ.ಭಟ್, ವಕೀಲರಾದ ಬಿರ್ತಿ ನಿತೇಶ್ ಶೆಟ್ಟಿ, ಯೋಗೀಶ್ ಆಚಾರ್ಯ, ತಾಪಂ ಮಾಜಿ ಉಪಾಧ್ಯಕ್ಷ ಯು.ಸಿ.ಶೇಖಬ್ಬ ಶಿರ್ವ, ಎಎಸ್‌ಐ ಶ್ರೀಧರ್ ಕೆ.ಜೆ., ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಪಿಡಿಒ ಪ್ರವೀಣ್ ಡಿಸೋಜ ಸ್ವಾಗತಿಸಿದರು.
ರಾಜ್ಯಮಟ್ಟದ ಕ್ರೀಡಾಂಗಣಕ್ಕಾಗಿ 15 ಎಕರೆ ಜಾಗ ಮೀಸಲಿಟ್ಟದ್ದೇವೆ. ಇದನ್ನು ರಾಜ್ಯ ಕ್ರಿಕೆಟ್ ಮಂಡಳಿ ಗಮನಕ್ಕೆ ತರಲಾಗಿದೆ. ಬೆಳಪು ಗ್ರಾಮದಲ್ಲಿ ನಿವೇಶನ ರಹಿತರಿಗೆ ಹಕ್ಕು ಪತ್ರ ನೀಡಲು ನಿರಂತರ ಹೋರಾಟ ನಡೆಸಿದ್ದೇವೆ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಗ್ರಾಪಂ ಅರಣ್ಯ ಪ್ರದೇಶದಲ್ಲಿ ಹಲವು ವರ್ಷದಿಂದ ವಾಸವಾಗಿರುವವರಿಗೆ ಹಕ್ಕುಪತ್ರ ನೀಡುವಂತೆ ಗ್ರಾಮ ಆಡಳಿತಾಧಿಕಾರಿಗೆ ಸೂಚಿಸಲಾಗಿದೆ. ಕಂದಾಯ, ಅರಣ್ಯ ಇಲಾಖೆಗಳು ಜಂಟಿ ಸರ್ವೇ ಮಾಡಿ ವರದಿ ನೀಡಿದ್ದಾರೆ. ಈ ಗ್ರಾಮಸಭೆಯಲ್ಲಿ 166 ಕುಟುಂಬಗಳ ಜೀವನ ಭದ್ರತೆಗಾಗಿ ಮನೆ ನಂಬ್ರ ನೀಡಲಾಗುತ್ತಿದೆ. ಬೆಳಪು ಗ್ರಾಮದಲ್ಲಿ ದನಗಳ್ಳತನಕ್ಕಾಗಲೀ, ಮಾದಕ ವಸ್ತು ಸಾಗಾಟ, ಮಾರಾಟಕ್ಕಾಗಲೀ ಕಟ್ಟುನಿಟ್ಟಿನ ಕ್ರಮ ಪೊಲೀಸರು ಕೈಗೊಳ್ಳಬೇಕು ಎಂದು ದೇವಿಪ್ರಸಾದ್ ಶೆಟ್ಟಿ ಸೂಚಿಸಿದರು.