ಅಭಿವೃದ್ಧಿ ಕಾರ್ಯಕ್ಕೆ ನೌಕರರ ಕಾರ್ಯಕ್ಷಮತೆ ಮುಖ್ಯ

3 mlv 3
ಮಳವಳ್ಳಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತಾಲೂಕಿನ ಗ್ರಾಪಂಗಳ ಗುಮಾಸ್ತರು ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕಂಪ್ಯೂಟರ್ ಪಿತಾಮಹ ಚಾರ್ಲ್ಸ್ ಬ್ಯಾಬೇಜ್ ಅವರ ಜನ್ಮದಿನ ಹಾಗೂ ಆಪರೇಟರ್‌ಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಗ್ರಾಪಂ ಡೇಟಾ ಆಪರೇಟರ್‌ಗಳು ಮತ್ತು ನೌಕರ ವರ್ಗದವರನ್ನು ಅಭಿನಂದಿಸಲಾಯಿತು. ದೀಪು, ಕೇಶವಮೂರ್ತಿ, ಸಿ.ರುದ್ರಯ್ಯ, ಲಿಂಗರಾಜು, ಮಹೇಶ್ ಬಾಬು ಇದ್ದರು.
Published on

ಮಳವಳ್ಳಿ: ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕರ ಹಾಗೂ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಿರ್ವಹಣೆಯಾಗಲು ಕಂಪ್ಯೂಟರ್ ಆಪರೇಟರ್‌ಗಳ ಮತ್ತು ನೌಕರ ಕಾರ್ಯಕ್ಷಮತೆ, ಸಹಕಾರ ಅಗತ್ಯ ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದೀಪು ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತಾಲೂಕಿನ ಗ್ರಾಪಂಗಳ ಗುಮಾಸ್ತರು ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕಂಪ್ಯೂಟರ್ ಪಿತಾಮಹ ಚಾರ್ಲ್ಸ್ ಬ್ಯಾಬೇಜ್ ಅವರ ಜನ್ಮದಿನ ಹಾಗೂ ಆಪರೇಟರ್‌ಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿರುವ ಬಹಳಷ್ಟು ಸಮಸ್ಯೆಗಳಿಗೆ ಗ್ರಾಪಂ ಕಾರ್ಯಾಲಯಗಳಲ್ಲೇ ಪರಿಹಾರ ಕಂಡುಕೊಳ್ಳಬೇಕಿರುವ ಹಿನ್ನೆಲೆಯಲ್ಲಿ ಅಲ್ಲಿನ ಅಧಿಕಾರಿಗಳಿಗೆ ಬಹಳಷ್ಟು ಒತ್ತಡಗಳಿರುತ್ತವೆ. ಅವುಗಳ ನಿರ್ವಹಣೆ ತ್ವರಿತವಾಗಿ ಸಾಗಲು ಡೇಟಾ ಆಪರೇಟರ್ ಹಾಗೂ ನೌಕರ ವರ್ಗದ ಸಹಕಾರ ಬಹುಮುಖ್ಯ ಎಂದರು.

ಒತ್ತಡದ ನಡುವೆ ಕೆಲಸ ನಿರ್ವಹಿಸುವ ಸಿಬಂದಿಯನ್ನು ಸ್ಮರಿಸುವುದರ ಜತೆಗೆ ಅಭಿನಂದಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು ಇಂತಹ ಆಚರಣೆಗಳು ನಿರಂತರವಾಗಿ ಇರಲಿ ಎಂದು ತಿಳಿಸಿದರು.

ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆಗೂಡಿ ಕೆಲಸ ಮಾಡುವುದರಿಂದ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಡೇಟಾ ಎಂಟ್ರಿ ಆಪರೇಟರ್‌ಗಳು ನಮ್ಮ ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಿಡಿಒಗಳ ಸಂಘದ ಗೌರವಾಧ್ಯಕ್ಷ ಸಿ.ರುದ್ರಯ್ಯ, ತಾಪಂ ಸಹಾಯಕ ಲೆಕ್ಕಾಧಿಕಾರಿ ಲಿಂಗರಾಜು, ಪಿಡಿಒ ಮಹೇಶ್ ಬಾಬು ಸೇರಿದಂತೆ ತಾಲೂಕಿನ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್‌ಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net