

ಚನ್ನರಾಯಪಟ್ಟಣ: ಸರ್ಕಾರಿ ನೌಕರರ ನಡುವೆ ಭಿನ್ನಾಭಿಪ್ರಾಯವಿರದೆ ಎಲ್ಲ ಇಲಾಖೆಯ ನೌಕರರ ಮಧ್ಯೆ ಸಮನ್ವಯತೆ ಇದ್ದಾಗ ಮಾತ್ರ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ನೀಡುವುದರೊಂದಿಗೆ ತಾಲೂಕಿನ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚನ್ನರಾಯಪಟ್ಟಣ ತಾಲೂಕು ಘಟಕಕ್ಕೆ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಂ.ಆರ್.ಮಂಜುನಾಥ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರನ್ನು ಅಭಿನಂದಿಸಿ ಮಾತನಾಡಿದರು.
ನೌಕರರ ಭರವಸೆಗಳನ್ನು, ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಸರ್ಕಾರಿ ನೌಕರರ ಸಂಘ ಪ್ರಧಾನ ಪಾತ್ರವಹಿಸುತ್ತದೆ. ಸಂಘದಲ್ಲಿ ಕೆಲಸ ಮಾಡುವಂತಹ ಎಲ್ಲ ಸದಸ್ಯರೂ ಅದರ ಧ್ಯೇಯೋದ್ದೇಶಗಳಿಗೆ ಬೆಂಬಲ ನೀಡಬೇಕು. ಜತೆಗೆ ಎಲ್ಲ ನೌಕರರ ಆಶ್ವಾಸನೆಗಳ ಪೂರೈಕೆಗೂ ಪ್ರಯತ್ನಿಸಬೇಕು. ಚನ್ನರಾಯಪಟ್ಟಣ ತಾಲೂಕು ಸಂಘವು ಹಲವು ಆಶ್ವಾಸನೆಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯಮಟ್ಟದಲ್ಲಿ ಮಿಂಚುವಂತಾಗಲಿ, ನಿಮ್ಮ ಅಧಿಕಾರಾವಧಿಯಲ್ಲಿ ಸರ್ಕಾರ ಮತ್ತು ನೌಕರರ ನಡುವೆ ಸಮನ್ವಯ ಸಾಧಿಸಲು, ನೌಕರರ ಹಕ್ಕುಗಳ ರಕ್ಷಣೆಗೆ ಹಾಗೂ ಸ್ಥಳೀಯ ಮಟ್ಟದ ಸಮಸ್ಯೆಗಳ ಪರಿಹಾರಕ್ಕೆ ಬದ್ಧರಾಗಿರುವುದಾಗಿ ಹೇಳಿದರು.
ರಾಜ್ಯದಲ್ಲಿನ ಎಲ್ಲ ಇಲಾಖೆಗಳಲ್ಲಿ ನೌಕರರ ಹುದ್ದೆಗಳು ಖಾಲಿ ಇದ್ದು, 67 ಸಾವಿರ ಮಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ಕೆಲಸ ಮಾಡಿಸಲಾಗುತ್ತಿದೆ. ಸರ್ಕಾರ ಕಾಯಂ ನೌಕರರ ನೇಮಕಕ್ಕೆ ಮುಂದಾಗಬೇಕು ಇದರಿಂದ ಗುಣಮಟ್ಟದ ಕಾರ್ಯದೊಂದಿಗೆ ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ತಲುಪಲು ಸಾಧ್ಯವೆಂದರು.
ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷ ಎಂ.ಆರ್.ಮಂಜುನಾಥ್ ಮಾತನಾಡಿ, ತಾಲೂಕಿನ ಸರ್ಕಾರಿ ನೌಕರರಿಗೆಲ್ಲ ಹಿರಿಯಣ್ಣನಂತಿರುವ ಕ್ಷೇತ್ರದ ಶಾಸಕರು ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಂಡು ಆಡಳಿತಕ್ಕೆ ಚುರುಕು ತುಂಬಿದ್ದಾರೆ. ನೌಕರರ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಅವರ ನಡೆ ನಮಗೆ ಮಾದರಿ. ಅವರ ಚಿಂತನೆಗಳಿಗೆ ತಾಲೂಕಿನ ನೌಕರರು ಆಸರೆಯಾಗಿ ಕೆಲಸ ಮಾಡಿ ಅವರಿಗೆ ಕೀರ್ತಿ ತರಲು ಬದ್ಧವೆಂದರು.
ನೌಕರರ ಸಂಘಕ್ಕೆ ಅಧ್ಯಕ್ಷರಾಗಿ ಸದ್ಯ ನಿವೃತ್ತಿಯಾಗಿರುವ ಮಾಜಿ ಅಧ್ಯಕ್ಷರಾದ ಎಚ್.ಎನ್.ಲೋಕೇಶ್, ಮುರಾರ್ಜಿ ಮಂಜಣ್ಣ ಮಾತನಾಡಿದರು.
ನಿಕಟಪೂರ್ವ ಅಧ್ಯಕ್ಷ ಜಗನ್ನಾಥ್ ಗೌಡ, ಪುರಸಭಾಧ್ಯಕ್ಷ ಸಿ.ಎನ್.ಮೋಹನ್, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಆರ್. ಅನಿಲ್‌ಕುಮಾರ್, ಡಿವೈಎಸ್‌ಪಿ ಎನ್.ಕುಮಾರ್, ಗೌರವಾಧ್ಯಕ್ಷರ ಹನುಮೇಗೌಡ, ರಾಜ್ಯ ಪರಿಷತ್ ಸದಸ್ಯ ಎ.ಎಸ್.ಪ್ರಮೋದ್, ಅನುರಾಧಾ ಇತರರು ಇದ್ದರು.