ಪರಿಸರ ಸ್ನೇಹಿ ನ್ಯಾನೋ ರಸಗೊಬ್ಬರ ಬಳಕೆಗೆ ಒತ್ತು ನೀಡಿ

ಪರಿಸರ ಸ್ನೇಹಿ ನ್ಯಾನೋ ರಸಗೊಬ್ಬರ ಬಳಕೆಗೆ ಒತ್ತು ನೀಡಿ
Published on

ಚನ್ನರಾಯಪಟ್ಟಣ: ರೈತರು ಹರಳು ರೂಪದ ರಸಗೊಬ್ಬರಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿ ನ್ಯಾನೋ ರಸಗೊಬ್ಬರ ಬಳಸುವುದರಿಂದ ಭೂಮಿಯೂ ಫಲವತ್ತತೆ ಕಳೆದುಕೊಳ್ಳುವುದಿಲ್ಲ ಎಂದು ಸಿ.ಎನ್.ಬಾಲಕೃಷ್ಣ ಹೇಳಿದರು.

ಚನ್ನರಾಯಪಟ್ಟಣ ಕೃಷಿ ಇಲಾಖೆ ಹಾಗೂ ಕೋರಮಂಡಲ ಇಂಟರ್‌ನ್ಯಾಷನಲ್ ಲಿಮಿಟೆಡ್ ಸಂಸ್ಥೆ ಸಹಭಾಗಿತ್ವದಲ್ಲಿ ತಾಲೂಕಿನ ಕಸಬಾ ಹೋಬಳಿಯ ಡಿ.ಸಾತೇನಹಳ್ಳಿಯ ರೈತ ಪುಟ್ಟಸ್ವಾಮಿ ಅವರ ಜಮೀನಿನಲ್ಲಿ ಶನಿವಾರ ಕಬ್ಬಿನ ಬೆಳೆಗೆ ನ್ಯಾನೋ ರಸಗೊಬ್ಬರವನ್ನು ಆತ್ಮ ಯೋಜನೆಯಲ್ಲಿ ಡ್ರೋನ್ ಮೂಲಕ ಸಿಂಪಡಣೆ ಪ್ರಾತ್ಯಕ್ಷಿಕೆ ವೀಕ್ಷಿಸಿ ಮಾತನಾಡಿದರು.

ಕೃಷಿಗೆ ಬಳಸುವ ಹರಳು ರೂಪದ ರಸಗೊಬ್ಬರದಲ್ಲಿ ಶೇ.30ರಿಂದ 50ರಷ್ಟು ಮಾತ್ರ ಬೆಳೆಗಳಿಗೆ ಬಳಕೆಯಾಗುತ್ತದೆ. ಉಳಿದಂತೆ, ಪರಿಸರದ ಇತರ ಮೂಲಗಳಲ್ಲಿ ಶೇಖರಣೆಯಾಗುತ್ತದೆ. ಈ ಗೊಬ್ಬರ ಬೆಳೆಗಳಿಗೆ ಸಾರಜನಕ ರೂಪದಲ್ಲಿ ಅತ್ಯಂತ ಉಪಯುಕ್ತ ಪೋಷಕಾಂಶ ಮೂಲವಾಗಿದ್ದರೂ ಅತಿಯಾದ ಯೂರಿಯಾ ಬಳಕೆ ಮಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಮಣ್ಣಿನ ಆಮ್ಲೀಯತೆ, ನೀರಿನ ಮಾಲಿನ್ಯ ಮತ್ತು ಹಸಿರು ಮನೆಗಳ ಅನಿಲ ಪ್ರಮಾಣ ಹೆಚ್ಚಳ ಉಂಟು ಮಾಡುತ್ತದೆ. ಜತೆಗೆ ಬೆಳೆಗಳಿಗೆ ಇತರ ಪೋಷಕಾಂಶಗಳ ಲಭ್ಯತೆಯ ಮೇಲೆ ಅಸಮಾತೋಲನ ಹಾಗೂ ಸಸ್ಯಗಳಿಗೆ ವಿಷಕಾರಿಯಾಗಿ ಪರಿಣಾಮವಾಗಬಹುದು. ಬೆಳೆಗಳಿಗೆ ಹೆಚ್ಚಿನ ಕೀಟಬಾಧೆ ಹಾಗೂ ರೋಗಗಳು ಹೆಚ್ಚಾಗಬಹುದು. ಇದು ಮಾನವನ ಆರೋಗ್ಯದ ಮೇಲೂ ಪರಿಣಾಮ ಬಿರುತ್ತದೆ ಎಂದು ಕೃಷಿ ತಜ್ಞರು ಹೇಳುತ್ತಾರೆ ಎಂದರು.

ನ್ಯಾನೋ ಗೊಬ್ಬರ ದ್ರಾವಣ ರೂಪದ ಗೊಬ್ಬರವಾಗಿದೆ. ಕೃಷಿಯಲ್ಲಿ ಸಸಿಗಳ ಪೋಷಣೆಗೆ ಅವಶ್ಯಕವಾದ ಪೋಷಕಾಂಶ ತಲುಪಿಸಲು ದೇಶದ ನಾನಾ ಸಂಸ್ಥೆಗಳು ದ್ರವ ರೂಪದ ನ್ಯಾನೋ ರಸಗೊಬ್ಬರವನ್ನು ಸ್ವತಂತ್ರ ಪೇಟೆಂಟ್ ಅಡಿ ಸಿದ್ಧಪಡಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಪರಿಸರಕ್ಕೆ ಈ ಯೂರಿಯಾ ಬಳಕೆ ಹಿತಕರವಾಗಿದೆ ಎಂದರು.

ತಾಲ್ಲೂಕಿನಲ್ಲಿ ಡ್ರೋನ್ ಮೂಲಕ ಬೆಳೆಗಳಿಗೆ ನ್ಯಾನೊ ಯೂರಿಯಾ, ಡಿಎಪಿ ಸಿಂಪಡಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಡ್ರೋನ್ ದೀದಿ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳಿಗೆ ಶೇ 80 ರಷ್ಟು ಸಹಾಯ ಧನದಲ್ಲಿ ಪ್ರತೀ ಗ್ರಾಮ ಪಂಚಾಯಿತಿಗೂ ಡ್ರೋನ್‌ಗಳನ್ನು ಪೂರೈಸಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ಜಿ.ಎಸ್.ಶಂಕರಪ್ಪ, ಕೃಷಿ ಅಧಿಕಾರಿಗಳಾದ ಕಿರಣ್ ಕುಮಾರ್, ರಕ್ಷಿತ್, ಕೋರೇಮಂಡಲ್ ಕಂಪನಿ ಪ್ರತಿನಿಧಿ ಡಾ. ರಾಜಶೇಖರ್, ಕೃಷಿಕ ಸಮಾಜದ ಮಂಜೇಗೌಡ, ಕೃಷಿ ಸಖಿ ನಿಖಿತಾ, ಸ್ಥಳೀಯರಾದ ಸಂಜಯ್, ಭರತ್ ಮೇಸ್ತ್ರೀ ಇತರರಿದ್ದರು.

ಹರಳುರೂಪದ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಿದ್ದು, ನಿರೀಕ್ಷಿತ ಪ್ರಮಾಣದಷ್ಟು ಲಭ್ಯತೆ ಇಲ್ಲದ ಕಾರಣಕ್ಕೆ ರಾಜ್ಯ ಕೃಷಿ ಇಲಾಖೆ ಹರಳು ರೂಪದ ಯೂರಿಯಾಕ್ಕೆ ಪರ್ಯಾಯವಾಗಿ ದ್ರವ ರೂಪದ ನ್ಯಾನೋ ಯೂರಿಯಾ ಗೊಬ್ಬರಕ್ಕೆ ಪ್ರೋತ್ಸಾಹ ನೀಡಲಾರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net