ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ
ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯದ ಜತೆಗೆ ಕೌಶಲಾಧಾರಿತ ಶಿಕ್ಷಕ್ಕೆ ಒತ್ತುಕೊಡಬೇಕು ಎಂದು ಅನಾಹುತ ಯೂನೈಟೆಡ್ ಎಫರ್ಟ್ಸ್ ಫೌಂಡೇಷನ್ ಮುಖ್ಯಸ್ಥ ಡಾ.ಶ್ರವಣ ಸಲಹೆ ನೀಡಿದರು.
ತಾಲೂಕಿನ ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಫೌಂಡೇಷನ ಸಹಯೋಗದಲ್ಲಿ ಜಿಲ್ಲೆಯ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ ಬಗ್ಗೆ ಮಾಹಿತಿ ನೀಡಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತೆಗೆದು, ಪ್ರೋತ್ಸಾಹಿಸಬೇಕು. ಸ್ವಯಂ ಉದ್ಯೋಗದೊಂದಿಗೆ ಜೀವನ ಕಟ್ಟಿಕೊಳ್ಳಲು ಪ್ರೇರೇಪಿಸಬೇಕು ಎಂದರು.
ಬೆಂಗಳೂರು ವಿಭಾಗದ ವಿಷನ್ ಇಂಪ್ಯಾಕ್ಟ್ ವ್ಯವಸ್ಥಾಪಕ ರಾಘವೇಂದ್ರ ಪ್ರಸಾದ್ ಮಾತನಾಡಿ, ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಕೌಶಲಾಧಾರಿತ ತರಬೇತಿ ನೀಡುವುದರಿಂದ, ಅವರಲ್ಲಿ ಭರವಸೆ ಮೂಡಿಸಲು ಸಾಧ್ಯವಾಗುತ್ತದೆ. ಹಾಗಾಗಿ ಶಿಕ್ಷಕರು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲೆಯ ವಿವಿಧ ವಸತಿ ಶಾಲೆಗಳಿಂದ 50ಕ್ಕೂ ಹೆಚ್ಚು ಶಿಕ್ಷಕರು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಚಿಕ್ಕಬಳ್ಳಾಪುರ ನಿರ್ವಹಣಾ ತಂಡದ ಮುಖ್ಯಸ್ಥ ಶ್ರೀನಿವಾಸ್, ತುಮಕೂರು ಜಿಲ್ಲೆ ನಿರ್ವಹಣಾ ತಂಡದ ಮುಖ್ಯಸ್ಥ ನಿಂಗಪ್ಪ, ಕಂಟೆಂಟ್ ಮೆಹರಿನ್ ಫಾತಿಮಾ, ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲೆ ವಿಜಯಶ್ರೀ, ಶಿಕ್ಷಕ ಎಸ್.ಎ.ಪ್ರಸಾದ್ ಇದ್ದರು.