

ಹನೂರು: ಬಾಲ್ಯವಿವಾಹ ಕಾನೂನಿನಲ್ಲಿ ಅಪರಾಧವಾಗಿದ್ದು, ಈ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗುವ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂದು ಸಬ್ ಇನ್ಸ್‌ಪೆಕ್ಟರ್ ರಾಧಾ ಹೇಳಿದರು.
ತಾಲೂಕಿನ ಕುರಟ್ಟಿ ಹೊಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಾಯವಾಣಿ ತಂಡದ ವತಿಯಿಂದ ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ್ಯ ವಿವಾಹ ಹಾಗೂ ಹೆಣ್ಣು ಭ್ರೂಣಹತ್ಯೆ ನಿಷೇಧ ಸಂಬಂಧ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾನೂನಿನ ಅರಿವಿದ್ದರೂ ಬಾಲ್ಯ ವಿವಾಹ ಪ್ರಕರಣಗಳು ಕಂಡುಬರುತ್ತಿರುವುದು ವಿಪರ್ಯಾಸ. ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಬಾಲ್ಯವಿವಾಹ ಪ್ರಕರಣಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098 ಅಥವಾ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಲಹೆ ನೀಡಿದರು.
ಮಕ್ಕಳ ಸಹಾಯವಾಣಿ ವಿಷಯ ಸಂಯೋಜಕ ಮಹೇಶ್ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಹೆಣ್ಣು ಭ್ರೂಣ ಹತ್ಯೆ ನಿಷೇಧ ಕುರಿತು ಮಾಹಿತಿ ತಿಳಿಸಿದರು.
ಮಕ್ಕಳ ಸಹಾಯವಾಣಿ ಮೇಲ್ವೀಚಾರಕ ಭಾರ್ಗವ, ತಾಲೂಕು ಸಂಯೋಜಕ ಸಂತೋಷ್, ಎಸ್‌ಡಿಎಂಸಿ ಅಧ್ಯಕ್ಷ ನಟರಾಜು, ಮುಖ್ಯ ಶಿಕ್ಷಕ ಶಿವಶಂಕರ್ ನಾಯ್ಕ ಇತರರು ಇದ್ದರು.