ಜಲಮೂಲಗಳ ಪುನಶ್ಚೇತನಕ್ಕೆ ಒತ್ತು

FotoJet (1)
Published on

ಗುಡಿಬಂಡೆ: ಕೇಂದ್ರ ಪುರಸ್ಕೃತ ಯೋಜನೆಯಾದ ಅಮೃತ್ 2.0 ಯೋಜನೆಯಲ್ಲಿ ಕೈಗೊಳ್ಳಬೇಕಾದ ಜಲಮೂಲಗಳ ಪುನಶ್ಚೇತನ, ಹಸಿರು ಜಾಗ ಮತ್ತು ಉದ್ಯಾನವನ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಗುಡಿಬಂಡೆ ಪಟ್ಟಣ ಪಂಚಾಯಿತಿ ವಿಶೇಷ ಸಾಮಾನ್ಯಸಭೆ ಒಪ್ಪಿಗೆ ನೀಡಿತು.

ಅಧ್ಯಕ್ಷ ಎ.ವಿಕಾಸ್ ಅಧ್ಯಕ್ಷತೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚಿಸಲಾಯಿತು. ಪಪಂ 8ನೇ ವಾರ್ಡ್ ಸದಸ್ಯ ಬಾಬು ಮಾತನಾಡಿ, ಇತ್ತೀಚಿಗೆ ಸೋಷಿಯಲ್ ಮೀಡಿಯಗಳಲ್ಲಿ ಅಕ್ರಮ ಇ-ಖಾತೆಗಳು ಎಂದು ಸುದ್ದಿಗಳು ಹರಿದಾಡುತ್ತಿವೆ. ಇದರಲ್ಲಿ ಪಪಂ ಸದಸ್ಯರು ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇ-ಖಾತೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮುಖ್ಯಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಸ್ವಚ್ಛತೆ, ಬೀದಿದೀಪ ನಿರ್ವಹಣೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಇದೇ ಸಮಯದಲ್ಲಿ ಸರ್ಕಾರದಿಂದ ನೇಮಕ ಗೊಂಡ ನೂತನ ನಾಮನಿರ್ದೇಶಿತ ಸದಸ್ಯರಾದ ಅಂಬರೀಷ್, ಬಾಲಾಜಿ ಅವರನ್ನು ಸ್ವಾಗತಿಸಲಾಯಿತು. ಪಪಂ ಉಪಾಧ್ಯಕ್ಷ ಗಂಗರಾಜು, ಸದಸ್ಯರಾದ ಬಷೀರ್, ರಾಜೇಶ್, ವೀಣಾ, ಮಂಜುಳಾ, ನಗೀನ್‌ತಾಜ್, ಅನುಷಾ, ಜಿ. ರಾಜೇಶ್, ಸಿಬ್ಬಂದಿಗಳಾ ಚಕ್ರಪಾಣಿ, ಬಾಲಪ್ಪ ಮುಂತಾದವರು ಇದ್ದರು.

ದಾಖಲೆ ನೀಡದ ಅಧಿಕಾರಿ

ಸರ್ಕಾರಿ ಜಾಗಗಳಿಗೆ ಇತ್ತೀಚೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಇ-ಖಾತೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಕೆಲವು ದಾಖಲೆಗಳನ್ನು ತೋರಿಸಿ ಅಸಲಿಯೋ, ನಕಲಿಯೋ ಎಂದು ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದಾಗ, ನಮ್ಮ ಬಳಿ ದಾಖಲೆಗಳು ಇಲ್ಲ. ಈಗ ಎಲ್ಲರೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುತ್ತಾರೆ. ಅದರ ಪ್ರಕಾರ ಇ-ಖಾತೆ ಮಾಡಲಾಗುವುದು ಎಂದು ಉತ್ತರಿಸಿದರು.

ಯಾವುದಕ್ಕೆ ಅನುಮೋದನೆ?

ಪಪಂಗೆ ಬಿಡುಗಡೆಯಾದ ವಿವಿಧ ಅನುದಾನದಲ್ಲಿ ಉಳಿಕೆಯಾದ ಮೊತ್ತಕ್ಕೆ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾಯೋಜನೆ ತಯಾರಿಸುವುದು, ಎಸ್‌ಎಫ್‌ಸಿ ಮುಕ್ತನಿಧಿ ಅನುದಾನದ ಶೇ. 22.75, ಶೇ. 7.25 ಹಾಗೂ ಶೇ.5 ಯೋಜನೆಯಡಿ ನಿಗದಿಪಡಿಸಿದ ಅನುದಾನಕ್ಕೆ ಫಲಾನುಭವಿಗಳನ್ನು ಆಯ್ಕೆ ಮಾಡುವುದು, ಕೇಂದ್ರ ಸರ್ಕಾರದ ಅಮೃತ್ 2.0 ಯೋಜನೆಯಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಸೇರಿ ಹಲವು ವಿಚಾರಗಳನ್ನು ಚರ್ಚಿಸಿ ಆಡಳಿತ ಮಂಡಳಿಯಿಂದ ಅನುಮೋದನೆ ಪಡೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net