

ಹಾಸನ: ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಎಲ್ಲರೂ ಒತ್ತು ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸಂಸದರು, ಶಾಸಕರು, ಮಾಜಿ ಸಚಿವರು, ಪರಾಜಿತ ಅಭ್ಯರ್ಥಿಗಳು ಹಾಗೂ ಮುಖಂಡರು, ಕಾರ್ಯಕರ್ತರಿಗೆ ಸೂಚನೆ ನೀಡಿದರು.
ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿ, ನನಗೆ ಪಕ್ಷ ಸಂಘಟನೆ ಮುಖ್ಯ, ಹಾಸನದವರು ಭಾವನಾತ್ಮಕ ಸಂಬಂಧ ಹೊಂದಿರುತ್ತೀರಿ, ಅಕಸ್ಮಾತ್ ನಾನು ಇಲ್ಲಿಗೆ ಬಂದಾಗ ಅಥವಾ ನೀನು ನನ್ನಲ್ಲಿಗೆ ಬಂದಾಗ ನಾನು ಮಾತನಾಡಿಸದೇ ಇದ್ದರೆ ಯಾರೂ ಬೇಸರ ಪಟ್ಟುಕೊಳ್ಳಬಾರದು. ಪಕ್ಷದ ವಿಚಾರದಲ್ಲಿ, ಕೆಲಸ-ಕಾರ್ಯಗಳ ವಿಚಾರದಲ್ಲಿ ನೀವು ಹೇಳಿದ್ದನ್ನು ಮಾಡಲು ನಾನು ಸಿದ್ಧನಿದ್ದೇನೆ. ಕಾನೂನಾತ್ಮಕವಾದ ಯಾವುದೇ ಕೆಲಸ ಮಾಡಲು ಬದ್ಧನಿರುತ್ತೇನೆ ಎಂದರು.
ನಾನು ಬೇರೆಯವರ ರೀತಿ ಅಲ್ಲ, ಎಲ್ಲರೂ ಒಟ್ಟಾಗಿ ಪಕ್ಷವನ್ನು ಮತ್ತಷ್ಟು ಬಲವರ್ಧನೆ ಗೊಳಿಸೋಣ. ಆಂತರಿಕವಾಗಿ ಏನೇ ಇದ್ದರೂ ಬದಿಗೊತ್ತಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಶಿವರಾಂ-ಕೆಎಂಶಿ ಟಾಕ್‌ಫೈಟ್: ಈ ನಡುವೆ ಮಾತನಾಡಿದ ಮಾಜಿ ಸಚಿವ ಬಿ.ಶಿವರಾಂ, ಅನುದಾನವನ್ನು ಹೆಚ್ಚಾಗಿ ಅರಸೀಕೆರೆಗೆ ಕೊಡೋದಲ್ಲ. ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯ ಎಲ್ಲ ಕ್ಷೇತ್ರಗಳ ಮತದಾರರೂ ಓಟು ಹಾಕಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಕೆ.ಎಂ.ಶಿವಲಿಂಗೇಗೌಡರ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಇದಕ್ಕೆ ಕೌಂಟರ್ ಕೊಟ್ಟ ಶಿವಲಿಂಗೇಗೌಡರು, ನನ್ನ ಕ್ಷೇತ್ರಕ್ಕೆ ಅನುದಾನವನ್ನು ಎಲ್ಲಿಂದ ತಂದೆ ಎಂಬುದು ನನಗೆ ಗೊತ್ತು. ಅದೆಲ್ಲವನ್ನು ಇಲ್ಲಿ ಹೇಳಲು ಆಗಲ್ಲ. ದಯವಿಟ್ಟು ಯಾರೂ ಯಾರ ಕ್ಷೇತ್ರಕ್ಕೂ ಬರಬೇಡಿ, ಹಸ್ತಕ್ಷೇಪ ಮಾಡಬೇಡಿ. ನಾನಂತೂ ಬೇಲೂರಿಗೆ ಬರುವುದಿಲ್ಲ, ಆಯಾಯ ಕ್ಷೇತ್ರಗಳಲ್ಲಿ ಅವರವರು ಕೆಲಸ ಮಾಡಿಕೊಳ್ಳಲು ಬಿಟ್ಟು ಬಿಡಿ ಎಂದು ನೇರವಾಗಿ ಹೇಳಿದರು.
ನಾನೂ ಮೂಲ ಕಾಂಗ್ರೆಸ್ಸಿಗ: ಏತನ್ಮಧ್ಯೆ ಅರಸೀಕೆರೆಯಲ್ಲಿ ಮೂಲ ಕಾಂಗ್ರೆಸಿಗರನ್ನು ಕಡೆಗಣಿಸುತ್ತಿದ್ದೀರಿ ಎಂದು ಶಿವರಾಂ ಬಣದವರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಲಿಂಗೇಗೌಡರು, ನಾನೂ ಯೂತ್ ಕಾಂಗ್ರೆಸ್ ಅವಧಿಯಿಂದಲೂ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ನಾನೂ ಮೂಲ ಕಾಂಗ್ರೆಸ್ಸಿಗ. ನಂಜೇಗೌಡರು ಟಿಕೆಟ್ ನೀಡಲಿಲ್ಲ ಎಂದು ಬೇರೆ ಪಕ್ಷಕ್ಕೆ ಹೋಗಿದ್ದೆ ಎಂದು ಟಾಂಗ್ ಕೊಟ್ಟರು. ಮಧ್ಯೆ ಪ್ರವೇಶಿಸಿದ ಅನೇಕರು ಶಿವರಾಂ ಮತ್ತು ಶಿವಲಿಂಗೇಗೌಡ ಅವರನ್ನು ಸಮಾಧಾನ ಪಡಿಸಿದರು.
ಸಭೆಯಲ್ಲಿ ಮಾತನಾಡಿದ ಹಲವು ಮುಖಂಡರು, ಸರ್ಕಾರದ ವಿವಿಧ ಸಮಿತಿಗಳಿಗೆ ಪಕ್ಷಕ್ಕಾಗಿ ದುಡಿದಿರುವ ಮುಖಂಡರನ್ನು ನಾಮನಿರ್ದೇಶನ ಮಾಡಿ, ಕಳೆದ ಎರಡೂವರೆ ವರ್ಷಗಳಿಂದ ಖಾಲಿ ಇರುವ ಹುಡಾಕ್ಕೆ ಯಾರನ್ನೇ ಮಾಡಿ, ಬೇಗನೇ ಅಧ್ಯಕ್ಷರನ್ನು ನೇಮಿಸಿ ಎಂದು ಸಚಿವರೆದುರು ಮನವಿ ಮಾಡಿದರು. ಹುಡಾ ವಿಚಾರದಲ್ಲಿ ನಡೆಯಬಾರದ ಅನೇಕ ಬೆಳವಣಿಗೆ ನಡೆಯುತ್ತಿದ್ದು, ಇದಕ್ಕೆಲ್ಲಾ ಇತಿಶ್ರೀ ಹಾಡಿ ಎಂದು ವಿನಂತಿಸಿದರು.
ಸಭೆಯಲ್ಲಿ ಸಂಸದ ಶ್ರೇಯಸ್ ಪಟೇಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮಾಜಿ ಶಾಸಕರಾದ ಸಿ.ಎಸ್.ಪುಟ್ಟೇಗೌಡ, ಎಂ.ಎ. ಗೋಪಾಲಸ್ವಾಮಿ, ಮುಖಂಡರಾದ ಎಚ್. ಕೆ.ಮಹೇಶ್, ಡಿ.ಸಿ.ಸಣ್ಣಸ್ವಾಮಿ, ಬಾಗೂರು ಮಂಜೇಗೌಡ, ಶಂಕರ್, ಎಚ್.ಎಸ್. ವಿಜಯಕುಮಾರ್, ಬನವಾಸೆ ರಂಗಸ್ವಾಮಿ, ಶ್ರೀಧರ್‌ಗೌಡ, ಎಂ.ಟಿ.ಕೃಷ್ಣೇಗೌಡ, ವೈ. ಎನ್.ಕೃಷ್ಣೇಗೌಡ, ಬೈರಮುಡಿ ಚಂದ್ರು, ಪ್ರಸನ್ನ ಕುಮಾರ್, ಬಾಚಿಹಳ್ಳಿ ಪ್ರದೀಪ್ ಗೌಡ, ಪಕ್ಷದ ಜಿಲ್ಲಾ ವಕ್ತಾರ ದೇವರಾಜೇಗೌಡ ಇತರರಿದ್ದರು.