

ಬೆಂಗಳೂರು: ಹುಬ್ಬಳ್ಳಿ-ಧಾರವಾಡದ ಕೈಗಾರಿಕೆಗಳ ಬೆಳವಣಿಗೆಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಿಎಂರನ್ನು ಭೇಟಿ ಮಾಡಿದ ಹುಬ್ಬಳ್ಳಿ-ಧಾರವಾಡ ಡೆವಲಪ್ಮೆಂಟ್ ಪೋರಂ (ಎಚ್ಡಿಡಿಎಫ್) ಅಧ್ಯಕ್ಷ ಮತ್ತು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರ ನೇತೃತ್ವದ ನಿಯೋಗದ ಜತೆ ಚರ್ಚೆ ಬಳಿಕ, ಅಲ್ಲಿನ ಕೈಗಾರಿಕೆಗಳ ಅಭಿವೃದ್ಧಿಗೆ ಅಗತ್ಯವಿರುವ ಕ್ರಮವಹಿಸುವ ಭರವಸೆ ನೀಡಿದರು.
ಸ್ಪೆಷಲ್ ಇನ್ವೆಸ್ಟ್ಮೆಂಟ್ ರೀಜನ್ (ಎಸ್ಐಆರ್) ಮಾಡುವುದಕ್ಕೆ ಜಗದೀಶ್ ಶೆಟ್ಟರ್ ಕೈಗಾರಿಕಾ ಸಚಿವರಾಗಿದ್ದ ಸಂದರ್ಭದಲ್ಲಿ ಕಾಯ್ದೆಯ ಕರಡು ಸಿದ್ಧಪಡಿಸಲಾಗಿತ್ತು. ಈ ಕಾಯ್ದೆ ತಂದರೆ ಕೈಗಾರಿಕಾ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ವಿನಂತಿಸಲಾಯಿತು. ಫಾಸ್ಟ್ ಮೂವಿಂಗ್ ಕ್ಲಸ್ಟರ್ ಗೂಡ್ಸ್ (ಎಫ್ಎಂಸಿಜಿ)ಮಾಡಬೇಕು ಎನ್ನುವ ನಿಟ್ಟಿನಲ್ಲಿ ಈ ಹಿಂದೆಯೇ ನಿರ್ಣಯವಾಗಿದೆ. ಉಲ್ಲಾಸ್ ಕಾಮತ್ ಸಮಿತಿ ನೀಡಿರುವ ಶಿಫಾರಸು ಪ್ರಕಾರ ತೆರಿಗೆ ವಿನಾಯಿತಿ ಸೇರಿ ಹಲವು ಸೌಲಭ್ಯ ನೀಡುವ ಕಡತ ಆರ್ಥಿಕ ಇಲಾಖೆಯಲ್ಲಿ ಬಾಕಿಯಾಗಿದೆ ಎನ್ನುವುದನ್ನು ಸಿಎಂ ಗಮನಕ್ಕೆ ತರಲಾಯಿತು. ಲಂಚ್ ಪಾರ್ಕ್ಗೆ 100 ಎಕರೆ ಭೂಮಿಯನ್ನು ಮೀಸಲಿಡಬೇಕು. ಫುಡ್ ಮತ್ತು ಟೆಕ್ಸ್ಟೈಲ್ ಪಾರ್ಕ್ಗಾಗಿ 500 ಎಕರೆ ಜಾಗ ನೀಡಬೇಕು. ಲ್ಯಾಂಡ್ ಬ್ಯಾಂಕ್ನಲ್ಲಿ ಹೂಡಿಕೆದಾರರಿಗೆ ಭೂಮಿ ಕಾಯ್ದಿರಿಸಬೇಕು. ಬಜೆಟ್ನಲ್ಲಿ ಈ ವಿಷಯಕ್ಕೆ ಆದ್ಯತೆ ನೀಡಬೇಕು ಎಂದು ವಿನಂತಿಸಿಕೊಳ್ಳಲಾಯಿತು. ಹುಬ್ಬಳ್ಳಿ-ಅಂಕೋಲಾ ನಡುವೆ ರೈಲ್ವೆ ಮಾರ್ಗಕ್ಕೆ ವನ್ಯಜೀವಿ ಮಂಡಳಿ ಒಪ್ಪಿಗೆ ಪಡೆದು ಅಭಿವೃದ್ಧಿಪಡಿಸಬೇಕು. ಬೇಲಿಕೇರಿ ಪೋರ್ಟ್ ಅಭಿವೃದ್ಧಿಪಡಿಸಿದರೆ ಹುಬ್ಬಳ್ಳಿ ಭಾಗದ ಬೆಳವಣಿಗೆಗೆ ಅನುಕೂಲವಾಗಲಿದೆ ಎನ್ನುವುದನ್ನು ತಿಳಿಸಲಾಯಿತು. ಕೂಡಲೆ ಈ ಬಗ್ಗೆ ಗಮನ ಹರಿಸಿ ಕ್ರಮ ವಹಿಸುವುದಾಗಿ ಸಿಎಂ ತಿಳಿಸಿದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಸಚಿವರಾದ ಶಂಕರ ಮುನೇನಕೊಪ್ಪ, ಹಾಲಪ್ಪ ಆಚಾರ್, ಶಾಸಕರಾದ ಅರವಿಂದ ಬೆಲ್ಲದ್, ಸಿ.ಎಂ. ನಿಂಬಣ್ಣವರ್, ಕೆಎಲ್ಇ ವಿವಿ ವಿಸಿ ಡಾ.ಅಶೋಕ್ ಶೆಟ್ಟರ್, ಉದ್ಯಮಿ ನಂದಕುಮಾರ್, ರಾಜಣ್ಣ ಕೊರವಿ, ಗೋವಿಂದ ಜೋಶಿ ಉಪಸ್ಥಿತರಿದ್ದರು.
ಆಸ್ಪತ್ರೆಗೆ ನೆರವಿನ ಆಶ್ವಾಸನೆ: ಹಲವು ದಶಕಗಳಿಂದ ಸೇವಾಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಯ ಅಭಿವೃದ್ಧಿಗೆ ಸರ್ಕಾರದಿಂದ ಈ ಬಾರಿಯ ಬಜೆಟ್ನಲ್ಲಿ ಅಗತ್ಯ ನೆರವು ಕೊಡಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ಆಶ್ವಾಸನೆ ನೀಡಿದರು. ಆಸ್ಪತ್ರೆ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಹಲವು ವರ್ಷಗಳಿಂದ ಬದಲಾಗದ ಆಸ್ಪತ್ರೆ ಚಿಕಿತ್ಸಾ ದರ ಪಟ್ಟಿಯನ್ನು ಕೂಡಲೆ ಪರಿಷ್ಕರಣೆ ಮಾಡಿಕೊಡುವುದಾಗಿಯೂ ಹೇಳಿದರು. ನಿಯೋಗದಲ್ಲಿ ಸಂಸ್ಥೆಯ ಚೇರ್ಮನ್ ಡಾ. ಬಿ.ಆರ್. ಪಾಟೀಲ್, ನಿರ್ದೇಶಕರಾದ ಮಹೇಂದ್ರ ಸಿಂಘಿ, ಅನಿತಾ ಬಿ. ಪಾಟೀಲ ಇದ್ದರು.
ಬೆಂಗಳೂರು: ಹುಬ್ಬಳ್ಳಿಯಲ್ಲಿರುವ ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರ ನೇತೃತ್ವದ ನಿಯೋಗವು ಸಿಎಂ ಬೊಮ್ಮಾಯಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ಭೇಟಿ ಮಾಡಿ, 44 ವರ್ಷಗಳಿಂದ 1.50 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ ಹೆಗ್ಗಳಿಕೆ ಹೊಂದಿರುವ, ಉತ್ತರ ಕರ್ನಾಟಕ ಭಾಗದ ಜನರಿಗೆ ಜೀವ ಸಂಜೀವಿನಿಯಾಗಿರುವ ಕ್ಯಾನ್ಸರ್ ಆಸ್ಪತ್ರೆ ಕಾಯಕಲ್ಪಕ್ಕೆ ಸರ್ಕಾರ ಮುಂದಾಗಬೇಕು. ಆರ್ಥಿಕ ನೆರವನ್ನು ಬಜೆಟ್ನಲ್ಲಿ ಒದಗಿಸಬೇಕು ಎಂದು ಮನವಿ ಮಾಡಿತು.
ಮನವಿ ಸ್ವೀಕರಿಸಿದ ಸಿಎಂ ಮಾತನಾಡಿ, ಪದ್ಮಶ್ರೀ ಡಾ. ಆರ್.ಬಿ. ಪಾಟೀಲ್ ಸ್ಥಾಪಿಸಿರುವ ಈ ಆಸ್ಪತ್ರೆ ಸೇವೆ ಬಗ್ಗೆ ನನಗೆ ತಿಳಿದಿದೆ. ಅವರ ಸೇವೆಯನ್ನು ಸ್ಮರಿಸಿ ಸಂಸ್ಥೆಯನ್ನು ಅಭ್ಯುದಯಕ್ಕೆ ಕೊಂಡೊಯ್ಯುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ನೆರವು ನೀಡಲು ಬದ್ಧವಾಗಿದೆ. ಆಸ್ಪತ್ರೆಯ ಚಿಕಿತ್ಸಾ ದರಗಳನ್ನು ಪರಿಷ್ಕರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಈಗಲೇ ಸೂಚನೆ ನೀಡಲಾಗುವುದು ಎಂದರು.