ಅಂತರ್ಜಲ ರಕ್ಷಣೆಗೆ ಒತ್ತು ಡಿಕೆಶಿ

9 KKP 1 (1)
Published on

* ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ

*ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ

ಕನಕಪುರ

ತಾಲೂಕಿನಲ್ಲಿ ಅಂತರ್ಜಲ ರಕ್ಷಣೆಗೆ ಸರ್ಕಾರ ಮುಂದಾಗಿದ್ದು, ತಾಲೂಕಿನ ಎಲ್ಲ ಕೆರೆಗಳಿಗೂ 400 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಮೂಲಕ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ತಾಲೂಕಿನ ಭೂಹಳ್ಳಿ ಗ್ರಾಮದ ಸಮೀಪ ಜಲಸಂಪನ್ಮೂಲ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮದಿಂದ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕಾವೇರಿ ನದಿ ತೀರದ ಸಂಗಮದಿಂದ ಯೋಜನೆ ಸಾಕಾರಗೊಳಿಸಲು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಪ್ರಾರಂಭಿಕವಾಗಿ ಭೂಹಳ್ಳಿ, ಹೆಗ್ಗನೂರು ಸೇರಿ ಹಲವು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಇದಲ್ಲದೆ ತಾಲೂಕಿನ 21 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ ಎಂದರು.

ಅಂತರ್ಜಲ ರಕ್ಷಣೆ ಮಾಡಿ ರೈತರ ಬದುಕಿಗೆ ಉತ್ತಮ ಕೆಲಸವಾಗಬೇಕು ಎನ್ನುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಕೆರೆ ಕಟ್ಟೆಗಳನ್ನು ಅಭಿವೃದ್ಧಿಪಡಿಸಿ ನೀರು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ನಮ್ಮಲ್ಲೇ ಉಳಿದ ಸಾತನೂರು

ಈ ಹಿಂದೆ ಕ್ಷೇತ್ರ ಮರುವಿಂಗಡನೆ ನಂತರ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಸಾತನೂರು ಹೋಬಳಿಯನ್ನು ರಾಮನಗರ ಕ್ಷೇತ್ರಕ್ಕೆ ಸೇರಿಸಿಕೊಳ್ಳಲು ಹರ ಸಾಹಸ ಮಾಡಿದ್ದರು, ನಮ್ಮ ಹೋರಾಟದಿಂದ ಸಾತನೂರು ಕನಕಪುರದಲ್ಲೇ ಉಳಿಸಿಕೊಂಡಿದ್ದೇವೆ. ಆಗ ನನಗಾದ ತೃಪ್ತಿ ಇಂದು ಈ ಭಾಗದಲ್ಲಿ ಕೆರೆಗಳಿಗೆ ನೀರು ತುಂಬಿಸಿದ್ದಷ್ಟೇ ಸಂತೃಪ್ತಿ ತಂದಿದೆ. ಇದು ನಮ್ಮ ದೂರ ದೃಷ್ಟಿಯ ಫಲವಾಗಿದೆ. ಕೆರೆಕಟ್ಟೆಗಳಿಗೆ ಜನ ಜಾನುವಾರುಗಳಿಗೆ ಕುಡಿಯುವ ನೀರು ತುಂಬಿಸುವ ಮಹತ್ವಕಾಂಕ್ಷಿ ಇದಾಗಿದೆ ಎಂದು ಡಿಕೆಶಿ ಹೇಳಿದರು.

ಅಪಹಾಸ್ಯಕ್ಕೆ ತಕ್ಕ ಉತ್ತರ:

ಕನಕಪುರ ಕ್ಷೇತ್ರದ ಶಾಸಕನಾಗಿ ಬಂದಾಗ ಕೆಲವರು ಅಪಹಾಸ್ಯ ಮಾಡಿದ್ದುಂಟು, ಕನಕಪುರ ಸೇರಿ ಕೋಡಿಹಳ್ಳಿ, ದೊಡ್ಡ ಆಲಹಳ್ಳಿಯಲ್ಲಿ ರಸ್ತೆ ವಿಸ್ತರಣೆ ಮಾಡಲು ಅಪಹಾಸ್ಯ ಮಾಡಿದ್ದರು. ಆದರೆ, ಈ ಎಲ್ಲ ಕೆಲಸ ಮಾಡಿರುವುದು ವಿರೋಧಿಗಳ ಕಣ್ಮುಂದೆ ಸಾಕ್ಷಿಯಾಗಿ ನಿಂತಿದೆ ಎಂದು ಶಿವಕುಮಾರ್ ಹೇಳಿದರು.

ಮನಸಿದ್ದರೆ ಮಾರ್ಗ

ರೈತರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಸಮಗ್ರ ಕೃಷಿ ಯೋಜನೆ ಸೇರಿ ರೈತರ ಹಿತಕ್ಕಾಗಿ ಹಲವು ಸೌಲಭ್ಯ ನೀಡುತ್ತಿದೆ. ತಾಲೂಕನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಲು ಸಿದ್ಧತೆ ನಡೆಸಲಾಗಿದೆ. ಚನ್ನಪಟ್ಟಣ, ಮಾಗಡಿ, ರಾಮನಗರ ತಾಲೂಕುಗಳಲ್ಲೂ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗುವುದು. ಅಂತರ್ಜಲ ಹೆಚ್ಚಿಸಿ ಕೃಷಿಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ರೈತರು ಕಸಬು ಮರೆಯಬೇಡಿ. ರಾಮನಗರ ಸಮೀಪ ಹೈಟೆಕ್ ರೇಷ್ಮೆ ಕೃಷಿ ಮಾರುಕಟ್ಟೆ ನಿರ್ಮಾಣವಾಗಲಿದೆ. ಎಲ್ಲ ಕಾಯಕ ಮಾಡುವ ಮೂಲಕ ಮನಸ್ಸಿದ್ದರೆ ಮಾರ್ಗ ಎನ್ನುವುದು ಸಾಕ್ಷಿಯಾಗಿದೆ ಎಂದು ಡಿಸಿಎಂ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net