ಪ್ರಕೃತಿ ಸಮತೋಲನಕ್ಕೆ ಅರಣ್ಯ ಕೃಷಿಗೆ ಒತ್ತು

Rmgm-Ph-001-Nursuri Gida-Samajika Aranya Stoty Rmgm-13-6-224
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ತಾಲೂಕಿನ ಸಾಮಾಜಿಕ ವಲಯ ಅರಣ್ಯ ಇಲಾಖೆ, ಅರಣ್ಯ ಕೃಷಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೈತರಿಗೆ ನರೇಗಾ ಯೋಜನೆ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಮತ್ತಿತರ ಯೋಜನೆಗಳ ಮೂಲಕ ಗಿಡ ಬೆಳೆಸಿ ರೈತರಿಗೆ ವಿತರಿಸಲು ಸಿದ್ಧವಾಗಿದೆ.

ಸರ್ಕಾರ, ಅರಣ್ಯ ಪ್ರದೇಶ ವಿಸ್ತರಿಸುವ ಜತೆಗೆ ಪ್ರಕೃತಿ ಸಮತೋಲನ ಕಾಯ್ದುಕೊಳ್ಳಲು ಪೂರಕವಾಗುವಂತೆ ಪ್ರತಿವರ್ಷ ಗಿಡ ಬೆಳೆಸಲು ಹಲವು ಯೋಜನೆ ಹಮ್ಮಿಕೊತ್ತಿದೆ. ನರೇಗಾ ಯೋಜನೆಯಿಂದ ರೈತರಿಗೆ ಪ್ರೋತ್ಸಾಹ ನೀಡುತ್ತಿದೆ. ಯೋಜನೆ ಲಾಭ ರೈತರಿಗೆ ತಲುಪುವ ವ್ಯವಸ್ಥೆ ಮತ್ತು ಗಿಡ ಬೆಳೆಸಲು ಪ್ರೇರೇಪಿಸಲು ಇಲಾಖೆ ಮುಂದಡಿ ಇಟ್ಟಿದೆ.

ಮೇ ಕೊನೇ ವಾರದಿಂದ ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗಿದ್ದು, ರೈತರು ಭೂಮಿ ಹದ ಮಾಡುವತ್ತ ಮುಖ ಮಾಡಿದ್ದಾರೆ. ಗಿಡ ಬೆಳೆಸುವ ರೈತರಿಗೆ ನರೇಗಾ ಯೋಜನೆಯಲ್ಲಿ ಸಹಾಯಧನ ಸಿಗುತ್ತದೆ. ಅರಣ್ಯ ಕೃಷಿ ಮಾಡುವ ರೈತರಿಗೆ ಬೇಕಾದ ಗಿಡ ಬೆಳೆಸಿ ಅಗತ್ಯಕ್ಕೆ ತಕ್ಕಂತೆ ಯೋಜನೆಯಲ್ಲಿನ ಲಾಭ ತಲುಪಿಸುತ್ತಿದೆ.

ಸಾಮಾಜಿಕ ಅರಣ್ಯ ವಲಯ ರಾಮನಗರದ ಹುಲಿ ಮುತ್ತಿಗೆ ನರ್ಸರಿಯಲ್ಲಿ ರೈತರಿಗೆ ನರೇಗಾ ಯೋಜನೆಯಲ್ಲಿ ಉಚಿತವಾಗಿ ಗಿಡ ನೀಡಲಾಗುತ್ತದೆ. ಜತೆಗೆ ಗಿಡಗಳ ಬೆಳವಣಿಗೆಗೂ ಸಹಾಯಧನ ಸಿಗುತ್ತದೆ. ಸಾರ್ವಜನಿಕರಿಗೂ ರಿಯಾಯಿತಿ ದರದಲ್ಲಿ ಗಿಡಗಳನ್ನು ನೀಡಲಾಗುತ್ತದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಮಲ್ಲೇಶ್ ತಿಳಿಸಿದ್ದಾರೆ.

ಉಚಿತವಾಗಿ ಸಿಗುವ ಗಿಡಗಳು

8*12 ಅಳತೆ ಚೀಲದಲ್ಲಿ 30 ಸಾವಿರ ಗಿಡ ಬೆಳೆಸಲಾಗಿದೆ. ಮಹಾಗನಿ 10 ಸಾವಿರ, ಸಿಲ್ವರ್ ವಕ್ 5 ಸಾವಿರ, ಹೆಬ್ಬೇವು 5 ಸಾವಿರ, ಹುಣಸೆ, ಬೇವು, ಬಿದಿರು, ಹೆಬ್ಬೇವು ಇತರ 10 ಸಾವಿರ ಗಿಡ ಬೆಳೆಸಲಾಗಿದೆ. ಮರ ಆಧಾರಿತ ಕೃಷಿ ಬೇಸಾಯಕ್ಕೆ ರೈತರಿಗೆ ಒಂದು ಎಕರೆಗೆ 40 ಗಿಡ ಉಚಿತವಾಗಿ ನರೇಗಾ ಯೋಜನೆ ಮುಖಾಂತರ ಸಂಬಂಧಿಸಿದ ದಾಖಲಾತಿ ಪಡೆದು ನೀಡಲಾಗುತ್ತದೆ. ಬೆಳೆದ ಒಂದು ಗಿಡಕ್ಕೆ ಕೂಲಿ ಮೊತ್ತ, ಸಾಮಗ್ರಿ ಮೊತ್ತ ಸೇರಿ 107 ರೂಪಾಯಿಗಳನ್ನು ರೈತರಿಗೆ ಪ್ರೋತ್ಸಾಹಧನ ನೀಡಲಾಗುವುದು.

ಪಡೆಯುವುದು ಹೇಗೆ?

ಈ ಯೋಜನೆಯ ಲಾಭ ಪಡೆಯುವ ರೈತರು ಗ್ರಾಮ ಪಂಚಾಯಿಯಲ್ಲಿ ಜಾಬ್‌ಕಾರ್ಡ್ ಹೊಂದಿರಬೇಕು. ಜಮೀನಿನ ಪಹಣಿ ಹೊಂದಿರಬೇಕು. ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ನೀಡಬೇಕು. ಗಿಡ ಬೇಕು ಎಂದು ಗ್ರಾಪಂನಲ್ಲಿ ನೋಂದಣಿ ಮಾಡಿದರೆ ಜಿಲ್ಲಾ ಪಂಚಾಯಿತಿಯಲ್ಲಿ ಅನುಮೋದನೆಗೊಂಡು ರೈತರಿಗೆ ನರೇಗಾ ಯೋಜನೆಯಲ್ಲಿ ಉಚಿತ ಗಿಡಗಳು ಸಿಗುತ್ತವೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ

ಈ ಯೋಜನೆಯಲ್ಲಿ 8*12 ಅಳತೆ ಚೀಲದಲ್ಲಿ ರಕ್ತಚಂದನ 5 ಸಾವಿರ, ಬೀಟೆ 5 ಸಾವಿರ, ಹೊನ್ನೆ 5 ಸಾವಿರ, ಮಹಾಗನಿ, ಸಿಲ್ವರ್, ಹುಣಸೆ, ಇತರ 5 ಸಾವಿರ ಸೇರಿ 20 ಸಾವಿರ ಗಿಡ ಬೆಳೆಸಲಾಗಿದೆ. ನರೇಗಾ ಯೋಜನೆಯಲ್ಲೂ ನೊಂದಾಯಿಸಿಕೊಂಡರೆ ಈ ಯೊಜನೆಯ ಲಾಭ ಪಡೆಯಲು ಅವಕಾಶ ಇದೆ. ಒಂದು ಗಿಡಕ್ಕೆ ರಿಯಾಯಿತಿ ದರದಲ್ಲಿ 6 ರೂ. ಗೆ ಸಿಗಲಿದೆ. ಪೋಷಣೆಗೆ ಮೊದಲವರ್ಷ 1 ಗಿಡಕ್ಕೆ 14 ರೂ., ಎರಡನೇ ವರ್ಷ 1 ಗಿಡಕ್ಕೆ 7 ರೂ., 3 ನೇ ವರ್ಷ 7 ರೂ. ದೊರೆಯುತ್ತದೆ.

ಸಾರ್ವಜನಿಕ ವಿತರಣೆ ಗಿಡಗಳು

ಆರ್‌ಎಸ್‌ಪಿಡಿ ಯೋಜನೆಯಲ್ಲಿ 8*12 ಅಳತೆ ಚೀಲದಲ್ಲಿ 5 ಸಾವಿರ ಶ್ರೀಗಂಧ, 6*9 ಅಳತೆ ಚೀಲದಲ್ಲಿ 5 ಸಾವಿರ ಸಿಲ್ವರ್ ಬೆಳೆಸಲಾಗಿದೆ. 8*12 ಅಳತೆಗೆ 6 ರೂ. 6*9 ಅಳತೆಗೆ 3 ರೂ. ಅಲ್ಲದೆ ಪ್ರಾದೇಶಿಕ ಅರಣ್ಯ ವಲಯದಲ್ಲಿ ನೋಂದಾಯಿಸಿಕೊಂಡು ಕೃಷಿ ಪ್ರೋತ್ಸಾಹ ಯೋಜನೆ ಲಾಭ ಪಡೆಯಬಹುದು. ಪ್ರತಿ ಗಿಡದ ಪೋಷಣೆಗೆ ಮೊದಲ ವರ್ಷ 35 ರೂ., ಎರಡನೇ ವರ್ಷ 40 ರೂ., 3 ನೇ ವರ್ಷ 50 ರೂ. ಪಡೆಯಬಹದು. ಪ್ರತಿ ರೈತನಿಗೆ 400 ಗಿಡಗಳವರೆಗೆ ಪ್ರೋತ್ಸಾಹಧನ ಸಿಗಲಿದೆ.

ಗ್ರಾಪಂ ನರೇಗಾ ಯೋಜನೆಯ ಲಾಭ ಸಾರ್ವಜನಿಕರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾ ಬರುತ್ತಿದೆ. ರೈತರಿಗೆ ಅರಣ್ಯ ಇಲಾಖೆ ಗಿಡ ಬೆಳೆಸಿ ಅರಣ್ಯ ಕೃಷಿಗೆ ಉತ್ತೇಜನ ನೀಡುತ್ತಿರುವುದು ಸಂತಸದ ವಿಷಯ. ಆದರೆ, ಬೆಳೆಸಿ ಮಾರಾಟಕ್ಕೆ ಅಣಿಗೊಳಿಸಿದ ಮರಗಳಿಗೆ ಬೆಲೆ ಸಿಗುತ್ತಿಲ್ಲ. ಒಂದು ಟನ್ ಹೆಬ್ಬೇವಿಗೆ -್ಝಠಿ;8 ಸಾವಿರ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ದಲ್ಲಾಳಿಗಳು -್ಝಠಿ;2 ರಿಂದ -್ಝಠಿ;3 ಸಾವಿರಕ್ಕೆ ಖರೀದಿಸುತ್ತಿದ್ದಾರೆ. ರೈತರಿಗೆ ಲಾಭ ಸಿಗುತ್ತಿಲ್ಲ. ಅರಣ್ಯ ಇಲಾಖೆ ಕೂಡಲೇ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಬೆಲೆ ನಿಗದಿ ಮಾಡಿ ರೈತನಿಗೆ ಲಾಭ ಸಿಗುವ ವ್ಯವಸ್ಥೆ ಮಾಡಬೇಕು.ಬಿ.ಸಿ.ಹೇಮಂತ್‌ಕುಮಾರ್ಬನ್ನಿಕುಪ್ಪೆ ಗ್ರಾಪಂ ಅಧ್ಯಕ್ಷ
ನರೇಗಾ ಯೋಜನೆ ಮೂಲಕ ರೈತರಿಗೆ ಉಚಿತ ಗಿಡ ವಿತರಣೆ ಮಾಡಲಾಗುತ್ತದೆ. ಜತೆಗೆ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲು ಗಿಡ ಬೆಳೆಸಲಾಗಿದೆ. ಅಲ್ಲದೆ ರಸ್ತೆ ಬದಿ ಗಿಡ ನೆಡಲು, ರಾಮನಗರ ತಾಲೂಕಿನ ಸರ್ಕಾರಿ ಜಾಗಗಳು, ಸ್ಮಶಾನಗಳು, ಶಾಲೆ ಆವರಣಗಳು, ದೇವಸ್ಥಾನ ಜಾಗ, ಗುಂಡು ತೋಪುಗಳಲ್ಲಿ ಗಿಡ ನೆಡಲು ಪ್ರತ್ಯೇಕವಾಗಿ ಗಿಡ ಬೆಳೆಸಲಾಗಿದೆ. ಮಳೆಗಾಲ ಪ್ರಾರಂಭವಾಗಿದ್ದು ಗಿಡ ನಾಟಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.ಮಲ್ಲೇಶ್ಸಾಮಾಜಿಕ ವಲಯ ಅರಣ್ಯಾಧಿಕಾರಿ, ರಾಮನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net