

ಮೂಗೂರು: ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಸಹಕಾರ ಪಡೆದು ಸದ್ಯದಲ್ಲೇ ಗ್ರಾಮಕ್ಕೆ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯ ಮಂಜೂರು ಮಾಡಿಸುವುದಾಗಿ ಗ್ರಾಮದ ಹಿರಿಯ ಮುಖಂಡ ಎಂ.ಡಿ.ಬಸವರಾಜು ಹೇಳಿದರು.
ಮೂಗೂರಿನ ಕೆಪಿಎಸ್ ಶಾಲೆಯ ಕಾಲೇಜು ವಿಭಾಗದಲ್ಲಿ ನಡೆದ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಹೋಬಳಿ ಕೇಂದ್ರ ಸ್ಥಾನಕ್ಕೆ ವ್ಯಾಸಂಗ ಮಾಡಲು ಬರುವ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆಗೆ ಗ್ರಾಮಕ್ಕೆ ಸಮೀಪವಿರುವ ನೂತನವಾಗಿ ನಿರ್ಮಾಣಗೊಂಡ ಕಟ್ಟಡವನ್ನೇ ದುರಸ್ತಿ ಗೊಳಿಸಿ ಸಚಿವರ ಗಮನಕ್ಕೆ ತಂದು ಹಾಸ್ಟೆಲ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.
ಸಂಘಸಂಸ್ಥೆಗಳು ಗ್ರಾಮದ ಶಾಲೆಗಳ ಅಭಿವೃದ್ಧಿಗೆ ಗಮನಹರಿಸಬೇಕು. ವಿದ್ಯಾರ್ಥಿಗಳು ಸಾಧಕರನ್ನು ಪ್ರೇರಣೆಯಾಗಿ ತೆಗೆದುಕೊಂಡು ಮುನ್ನಡೆಯಬೇಕು ಎಂದರು.
ಉದ್ಯಮಿ ಮೂಗೂರು ಸುಧಾಕರ್ ಮಾತನಾಡಿ, ವಿದ್ಯಾರ್ಥಿಗಳು ಓದುವಾಗಲೇ ತಮ್ಮ ಗುರಿಯನ್ನು ನಿರ್ಧರಿಸಿಕೊಳ್ಳಬೇಕು ಅವಕಾಶಗಳನ್ನು ಸದ್ಭಳಕೆಮಾಡಿಕೊಂಡು ಸಾಧನೆ ಹಾದಿಯಲ್ಲಿ ಮುಂದುವರೆಯುವಂತೆ ತಿಳಿಸಿದರು.
ಮೂಗೂರು ಗೆಳೆಯರ ಬಳಗದಿಂದ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕೆಪಿಎಸ್ ಶಾಲೆಯ ಉಪಾಧ್ಯಕ್ಷ ಎಂ.ಎನ್.ಸೋಮಣ್ಣ, ಎಂ.ಡಿ. ಬಸವರಾಜು, ಕಾಲೇಜು ಸಿಬಿಸಿ ಅಧ್ಯಕ್ಷ ಜಯಂತ್, ಎಸ್‌ಡಿಎಂಸಿ ಅಧ್ಯಕ್ಷ ಎಂ ರಂಗಸ್ವಾಮಿ, ಪ್ರಾಂಶುಪಾಲ ರಾಚಯ್ಯ, ಉಪಪ್ರಾಂಶುಪಾಲ ಸಿ.ಪುಟ್ಟಸ್ವಾಮಿ, ಮೂಗೂರು ಗೆಳೆಯ ಬಳಗದ ಡಾ. ಶಿವಕುಮಾರ್, ನಂಜಪ್ಪ, ಮಹದೇವ ಶೆಟ್ಟಿ, ಬಸವಣ್ಣ, ಜಯಪಾಲ್ ಇತರರಿದ್ದರು.