

ಮಹದೇವಪುರ:ಕ್ಷೇತ್ರದಲ್ಲಿ ಗುಣಮಟ್ಟ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ದೂರು ಬಾರದಂತೆ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಬೇಕೆಂದು ಶಾಸಕಿ ಮಂಜುಳಾ ಲಿಂಬಾವಳಿ, ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಕ್ಷೇತ್ರದ ಹಾಲನಾಯಕನಹಳ್ಳಿ,ಕೊಡತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಸ್ತೆ,ಶಾಲೆ,ಅಂಗನವಾಡಿ ಕಟ್ಟಡ ಮತ್ತು ಅಂಬೇಡ್ಕರ್ ಭವನ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ಹತ್ತಾರು ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿದೆ. ನಿಗದಿ ಸಮಯದಲ್ಲಿ ಕಾಮಗಾರಿ ಮುಗಿಸಬೇಕು. ಈ ವೇಳೆ ಗುತ್ತಿಗೆದಾರರು ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಬೇಕು. ಹಾಲನಾಯಕನಹಳ್ಳಿ ಗ್ರಾಮದ ಕೋದಂಡರಾಮನಗರದಲ್ಲಿ ಅಂಬೇಡ್ಕರ್ ಭವನ, ಸರ್ಕಾರಿ ಶಾಲಾ ಕೊಠಡಿ ನಿರ್ಮಾಣ, ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನೆಲ್ಲಿಯಿಂದ ಚಿಕ್ಕನಾಯಕನಹಳ್ಳಿಯ ದಿಣ್ಣೆವರೆಗೂ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ ಎಂದರು.
ಕೊಡತಿ-ಹುಸ್ಕೂರು ಮುಖ್ಯರಸ್ತೆಯಿಂದ ಕೊಡತಿ-ಚಿಕ್ಕನಾಯಕನಹಳ್ಳಿ ಮುಖ್ಯರಸ್ತೆ ಸೇರುವ ರಸ್ತೆ, ಸರ್ಜಾಪುರ ರಸ್ತೆಯಿಂದ ಹಾಡೋಸಿದ್ದಾಪುರ ಮಾರ್ಗವಾಗಿ ಕೊಡತಿ ರೈಲ್ವೇ ಗೇಟ್ ಸಮೀಪ ಇರುವ ಮನ ಅಪಾರ್ಟ್‌ಮೆಂಟ್‌ವರೆಗೆ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಕೊಡತಿ ಕಾಲನಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗುತ್ತಿದೆ. ಸೂಲಿಕುಂಟೆ ಗ್ರಾಮದಿಂದ ದೊಮ್ಮಸಂದ್ರ- ಚಂದಾಪುರ ಮುಖ್ಯರಸ್ತೆ, ಮುಳ್ಳೂರು ಗ್ರಾಮದಲ್ಲಿ ಸ್ತ್ರೀಶಕ್ತಿ ಭವನ ಕಟ್ಟಡ, ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣ, ಕಾಚಮಾರನಹಳ್ಳಿ ಗ್ರಾಮದಲ್ಲಿ ಸ್ತ್ರೀಶಕ್ತಿ ಭವನ ಕಟ್ಟಡ, ಸಮುದಾಯ ಭವನ ಕಟ್ಟಡ ನಿರ್ಮಾಣ ಸೇರಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕಿ ಹೇಳಿದರು.
ನಗರ ಮಂಡಲದ ಅಧ್ಯಕ್ಷ ಎನ್.ಆರ್.ಶ್ರೀಧರ್ ರೆಡ್ಡಿ, ಭೂನ್ಯಾಯ ಮಂಡಲಿ ಮಾಜಿ ಸದಸ್ಯ ಬಾಬು ರೆಡ್ಡಿ, ಕೊಡತಿ ವಾರ್ಡ್ ಅಧ್ಯಕ್ಷ ಸತೀಶ್ ರೆಡ್ಡಿ, ವಾರ್ಡ್ ಉಸ್ತುವಾರಿ ಚಿಕ್ಕಣ್ಣ, ಗ್ರಾಪಂ ಸದಸ್ಯರಾದ ಮುಳ್ಳೂರು ನವೀನ್, ವಾಲೇಪುರ ಸೋಮಶೇಖರ್‌ರೆಡ್ಡಿ ಮುಖಂಡರಾದ ಬಸನಗೌಡ ಪಾಟೀಲ್, ಲಕ್ಷ್ಮಣ, ರಘು, ಅಶೋಶ್, ಮುರಳಿ ಮತ್ತಿತರರಿದ್ದರು.