ಸದಾನಂದ ಸುವರ್ಣರಿಗೆ ಭಾವಪೂರ್ಣ ವಿದಾಯ : ರಂಗ ಭೀಷ್ಮನಿಗೆ ಅಂತಿಮ ನಮನ ಸಲ್ಲಿಸಿದ ಗಣ್ಯರು

ganyaru
ರಂಗಕರ್ಮಿ ಸದಾನಂದ ಸುವರ್ಣ ಅವರಿಗೆ ಪುರಭವನದಲ್ಲಿ ಗಣ್ಯರು ಬುಧವಾರ ಅಂತಿಮ ನಮನ ಸಲ್ಲಿಸಿದರು. ದ.ಕ ಜಿಲ್ಲಾಡಳಿತ ಪರವಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮೃತರ ಅಂತಿಮ ದರ್ಶನ ಪಡೆದರು
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಅಗಲಿದ ರಂಗಕರ್ಮಿ, ಸಿನಿಮಾ ನಿರ್ದೇಶಕ, ನಿರ್ಮಾಪಕ ಸದಾನಂದ ಸುವರ್ಣ ಅವರಿಗೆ ಪುರಭವನದಲ್ಲಿ ಬುಧವಾರ ಅಂತಿಮ ನಮನ ಸಲ್ಲಿಸಲಾಯಿತು.
ಸುವರ್ಣ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ದ.ಕ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮೃತರ ಅಂತಿಮ ದರ್ಶನ ಪಡೆದರು. ಪಾಲಿಕೆ ಸದಸ್ಯ ನವೀನ್ ಡಿಸೋಜಾ, ಕಾಂಗ್ರೆಸ್ ನಾಯಕ ಹರೀಶ್ ಕುಮಾರ್, ಪ್ರಮುಖರಾದ ಡಾ.ಚಿನ್ನಪ್ಪ ಗೌಡ, ಡಾ.ಪ್ರಭಾಕರ ಜೋಶಿ ಸೇರಿದಂತೆ ರಂಗಭೂಮಿ, ಸಾಹಿತ್ಯ ಸಹಿತ ವಿವಿಧ ಕ್ಷೇತ್ರಗಳ ಪ್ರಮುಖರು ಅಂತಿಮ ನಮನ ಸಲ್ಲಿಸಿದರು. ಸದಾನಂದ ಸುವರ್ಣ ಅವರ ಇಚ್ಛೆಯಂತೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಅವರ ದೇಹ ದಾನ ಮಾಡಲಾಯಿತು.

ಮೂಲ್ಕಿಯವರಾದ ಸದಾನಂದ ಸುವರ್ಣ, 1931 ಡಿಸೆಂಬರ್ 24ರಂದು ಜನಿಸಿದ್ದರು. ಅವರು ನಿರ್ಮಿಸಿದ ಮೊದಲ ಸಿನಿಮಾ ಘಟಶ್ರಾದ್ಧ. ಗಿರೀಶ್ ಕಾಸರವಳ್ಳಿ ನಿರ್ದೇಶನದ ಮೊದಲ ಸಿನಿಮಾವಿದು. ಬಳಿಕ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಮನೆ, ಕುಬಿ ಮತ್ತು ಇಯಾಲ, ತಬರನ ಕಥೆ ಸಿನಿಮಾಗಳ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದರು. ದೂರದರ್ಶನಕ್ಕೆ ಗುಡ್ಡದ ಭೂತ ಧಾರಾವಾಹಿ ನಿರ್ಮಿಸಿ, ನಿರ್ದೇಶಿಸಿದ್ದರು. ಇದು ಪ್ರಕಾಶ್ ರೈ ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ವಯೋಸಹಜ ಅನಾರೋಗ್ಯದಿಂದ ಅವರು ಮಂಗಳವಾರ ಅಸುನೀಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net