ಫೋಟೋಗ್ರಫಿಗೆ ಭಾವನೆ ಮುಖ್ಯ: ಡಾ.ಡಿ.ವೀರೇಂದ್ರ ಹೆಗ್ಗಡೆ ಪ್ರತಿಪಾದನೆ

Bel_Rudset
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಫೋಟೋಗ್ರಫಿ ವೃತ್ತಿಯಲ್ಲಿ ಸಂದರ್ಭ, ಉದ್ದೇಶ, ಸಮಯ, ಭಾವನೆ ಮುಖ್ಯ. ಇವನ್ನು ಗಮನಿಸಿ ಫೋಟೋ ತೆಗೆಯುವ ಜಾಣ್ಮೆ ಹೊಂದಿರಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ ಸಮಾರೋಪ ಸಮಾರಂಭ ಹಾಗೂ ವಿಶ್ವ ಫೋಟೋಗ್ರಾಫರ್ಸ್ ದಿನಾಚರಣೆಯಲ್ಲಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ಧರ್ಮಸ್ಥಳದ ಮ್ಯೂಸಿಯಂನಲ್ಲಿ ಸುಮಾರು 700 ಕ್ಯಾಮರಾಗಳಿವೆ. ಇದು ಫೋಟೋಗ್ರಫಿಯಲ್ಲಿ ಕ್ಯಾಮರಾಗಳ ಮೌಲ್ಯವರ್ಧನೆಯನ್ನು ತೋರಿಸುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ಬೆಳವಣಿಗೆಯನ್ನು ನಿಮ್ಮ ಬುದ್ಧಿವಂತಿಕೆಯಲ್ಲಿ ನಿರ್ವಹಿಸಬೇಕು ಎಂದರು.


ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಜರ್ನಾದನ, ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ವಿಜಯ ಕುಮಾರ್ ಮಾತನಾಡಿದರು.

ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ ಅತಿಥಿ ಉಪನ್ಯಾಸಕ ಸೂರ್ಯಪ್ರಕಾಶ ಉಪಸ್ಥಿತರಿದ್ದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಕೆ.ಕರುಣಾಕರ ಜೈನ್ ವಂದಿಸಿದರು. 31 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಜಯರಾಮ್, ಸಿದ್ಧಾರ್ಥ ತರಬೇತಿಯ ಅನುಭವ ಹಂಚಿಕೊಂಡರು.

ಪ್ರಿಂಟಿಂಗ್ ಪೇಪರ್ ಬಗ್ಗೆ ಗಮನ

ಫೋಟೋಗ್ರಫಿ ಬಹಳ ಗಂಭೀರವಾದ ವಿಷಯವಾಗಿದ್ದು ದಾಖಲೆಯಾಗಿ ಬಳಸುವಂತದ್ದಾಗಿದೆ. ಫೋಟೋಗ್ರಫಿಯಲ್ಲಿ ಬೆಳಕಿನ ಮಹತ್ವ ತಿಳಿದುಕೊಳ್ಳಬೇಕು. ಯಾವ ಬೆಳಕಿನಲ್ಲಿ ಯಾವ ರೀತಿಯ ಫೋಟೋ ತೆಗೆಯಬೇಕು. ಫೋಟೋ ತೆಗೆಯುವ ಮೊದಲು ಮೂಡ್ ಅನ್ನು ಗಮನಿಸಬೇಕು. ಆವಾಗ ಮಾತ್ರ ಸುಂದರವಾದ ಫೋಟೋ ಮೂಡಿಬರುತ್ತದೆ. ಆಲ್ಬಮ್ ಮಾಡುವಾಗ ಹತ್ತು ಬಾರಿ ನೋಡುವ ರೀತಿಯಲ್ಲಿ ತಯಾರಿಸಬೇಕು. ಇವತ್ತು ವಿವಿಧ ರೀತಿಯ ಪ್ರಿಂಟಿಂಗ್ ಪೇಪರ್ ಬಂದಿದೆ. ಅದರ ಜ್ಞಾನವೂ ಇರಲಿ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net