ಕಾಸರಗೋಡು: ಹೊಸದುರ್ಗ-ವೆಲ್ಲರಿಕುಂಡು ಕಂದಾಯ ತಾಲೂಕುಗಳಲ್ಲಿ ಎಸ್‌ಸಿ-ಎಸ್‌ಟಿ ಕಾಲನಿಗಳು ಹಾಗೂ ವೆಲ್ಲೂಡ್ ಶ್ರೀದುರ್ಗಾ ಭಗವತಿ ದೇವಾಲಯ ಸೇರಿದಂತೆ ಜನವಸತಿಯಿರುವ ಪ್ರದೇಶ ಪರಿಗಣಿಸದೆ, ಖಾಸಗಿ ಮತ್ತು ಸಾರ್ವಜನಿಕ ವಲಯದಲ್ಲಿ ಸೌರ ವಿದ್ಯುತ್ ಸ್ಥಾವರ ಸ್ಥಾಪಿಸುವ ಯೋಜನೆಯ ಬಗ್ಗೆ ಮರು ಚಿಂತನೆ ನಡೆಸುವಂತೆ ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಎಂ.ಎಲ್. ಅಶ್ವಿನಿ ಆಗ್ರಹಿಸಿದರು.
ಸೌರವಿದ್ಯುತ್ ಸ್ಥಾವರ ವಿರೋಧಿಸಿ ಒಂದೂವರೆ ತಿಂಗಳಿನಿಂದ ಧರಣಿ ನಡೆಸುತ್ತಿರುವ ಕಾನಂನ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.
ಕೇಂದ್ರ ಸರ್ಕಾರ ಸೌರ ವಿದ್ಯುತ್ ಸೇರಿದಂತೆ ವಿವಿಧ ಯೋಜನೆಗಳಿಗೆ ಸಬ್ಸಿಡಿ ನೀಡುವುದರ ಮೂಲಕ ಪ್ರೋತ್ಸಾಹ ನೀಡುತ್ತಿದೆ. ಆದರೆ ಹೊಸದುರ್ಗ-ವೆಲ್ಲರಿಕುಂಡು ತಾಲೂಕುಗಳ ಗಡಿಭಾಗದ ಪರ್ವತ ಪ್ರದೇಶದಲ್ಲಿ ಪರಿಸರ ಸ್ನೇಹಿ ಸೌರ ವಿದ್ಯುತ್ ಉತ್ಪಾದನಾ ಯೋಜನೆ ಹೆಸರಲ್ಲಿ ಹಳ್ಳಿಗಳನ್ನೇ ನಿರ್ಮೂಲನೆ ಮಾಡಲು ನೋಡಲಾಗುತ್ತಿದೆ. ಜನಜೀವನ ಮತ್ತು ಪರಿಸರ ವ್ಯವಸ್ಥೆಯ ಉಳಿವಿಗಾಗಿ ವಿರೋಧಿಸಬೇಕಾದ ಅನಿವಾರ್ಯತೆಯಿದೆ ಎಂದರು.
ಹೋರಾಟ ಸಮಿತಿ ಉಪಾಧ್ಯಕ್ಷ ಪ್ರಭಾಕರನ್ ತೋಣಿಕಲ್, ಸಂಚಾಲಕ ಶ್ರೀಜಿತ್ ಪಕ್ಕಲೈ, ಜಂಟಿ ಸಂಚಾಲಕ ಸತ್ಯನ್ ಕಾನ, ಎಸ್‌ಟಿ ಮೋರ್ಚಾ ವೆಲ್ಲರಿಕುಂಡು ಸಂಚಾಲಕ ಸನೀಶ್ ಕಾನತ್, ಎಸ್‌ಟಿ ಮೋರ್ಚಾ ಕಾಂಜಂಗಾಡ್ ಕ್ಷೇತ್ರದ ಅಧ್ಯಕ್ಷ ರವಿ ತುಣುಪ್, ದುರ್ಗಾ ಭಗವತಿ ಸೇವಾ ಸಮಿತಿ ಕಾರ್ಯದರ್ಶಿ ಗಂಗಾಧರನ್ ಕಾನತ್, ಕುಂಜಿಕಣ್ಣನ್, ವೇಣು, ಹೋರಾಟ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.