

ಚಿಕ್ಕಬಳ್ಳಾಪುರ: ಭಗವಾನ್ ಕೃಷ್ಣನ ಸಂದೇಶದಂತೆ ಪರಸ್ಪರ ಎಲ್ಲ ಸಮುದಾಯಗಳು ಭಾವೈಕ್ಯತೆ ಮೆರೆದು, ಸಾಮರಸ್ಯದಿಂದ ಬಾಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್ ಕರೆ ನೀಡಿದರು.
ನಗರದ ವೇಣುಗೋಪಾಲ ದೇವಾಲಯದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಯಾದವ ಕ್ಷೇವಾಭಿವದ್ಧಿ ಸಂ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತ್ಯುತ್ಸವ ಉದ್ಘಾಟಿಸಿ ವಾತನಾಡಿದರು.
ಅಧರ್ಮವನ್ನು ಅಳಿಸಿ ಸತ್ಯ, ಧರ್ಮವನ್ನು ಎತ್ತಿ ಹಿಡಿಯಲು ಶ್ರೀಕೃಷ್ಣ ನಡೆದ ಹಾದಿ ಮಹತ್ವಪೂರ್ಣವಾದುದು. ಈ ಸಂದೇಶವನ್ನು ಅರಿತುಕೊಂಡು ಜಗತ್ತಿನ ಎಲ್ಲರ ಒಳಿತಿಗಾಗಿ ಶ್ರಮಿಸಬೇಕು. ಇಡೀ ವಿಶ್ವವೇ ಒಂದು ಕುಟುಂಬ ಎಂಬುದನ್ನು ಅರ್ಥ ವಾಡಿಕೊಂಡು ಎಲ್ಲರೂ ಸಾಮರಸ್ಯದ ಸಹಬಾಳ್ವೆ ಸಾಗಿಸಬೇಕು ಎಂದರು.
ಹಿಂದು ಧರ್ಮದ ಸಂಪ್ರದಾಯ, ಸಂಸ್ಕೃತಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆಯು ಅಗ್ರಸ್ಥಾನದಲ್ಲಿದೆ. ಅನಾದಿ ಕಾಲದಿಂದಲೂ ಆರಾಧಿಸುವ, ಪೂಜಿಸುವಂತಹುದನ್ನು ಪಾಲಿಸಿಕೊಂಡು ಬರಲಾಗಿದೆ ಎಂದರು.
ಮಹನೀಯರ ಜಯಂತ್ಯುತ್ಸವಗಳು ಯಾವುದೇ ಒಂದು ಜಾತಿ, ವರ್ಗ, ಸಮುದಾಯಕ್ಕೆ ಸೀಮಿತವಾಗಬಾರದು. ಎಲ್ಲರೂ ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು ಎಂದರು.
ಶ್ರೀ ಕೃಷ್ಣ ಭವನಕ್ಕೆ ₹50 ಲಕ್ಷ ಭರವಸೆ
ಜಿಲ್ಲಾ ಕೇಂದ್ರದಲ್ಲಿ ಶ್ರೀ ಕೃಷ್ಣ ಭವನವನ್ನು ನಿರ್ಮಿಸಲು ಲೋಕಸಭಾ ಕ್ಷೇತ್ರದ ಅಭಿವೃದ್ಧಿ ನಿಧಿಯಿಂದ 50 ಲಕ್ಷ ರೂ. ನೀಡುವುದಾಗಿ ಸಂಸದ ಡಾ.ಕೆ. ಸುಧಾಕರ್ ಭರವಸೆ ನೀಡಿದರು. ಹಿಂದೆ ಭವನ ನಿರ್ಮಿಸಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಮೀನು ಮಂಜೂರು ವಾಡಿ, ಅಗತ್ಯ ದಾಖಲೆ ಪತ್ರವನ್ನು ಯಾದವ ಸಂಘಕ್ಕೆ ನೀಡಲಾಗಿತ್ತು. ಈಗ ರಾಜ್ಯ ಸರ್ಕಾರವು ಅಗತ್ಯ ಅನುದಾನ ಒದಗಿಸಬೇಕು ಎಂದರು. ಶ್ರೀ ಕೃಷ್ಣನ ಆರಾಧಾನೆ ಹಿಂದು ಧರ್ಮಕ್ಕೆ ವಾತ್ರ ಸೀಮಿತವಾಗಿಲ್ಲ. ವಿದೇಶಗಳಲ್ಲೂ ಸಹ ಮಹತ್ವವನ್ನು ಅರಿತು ಪೂಜಿಸಲಾಗುತ್ತಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಧಾರ್ಮಿಕ ಕೇಂದ್ರಗಳ ಅಭಿವದ್ಧಿಗೆ ಒತ್ತು ನೀಡಿದ್ದಾರೆ. ಕಾಶಿ ಕ್ಷೇತ್ರವನ್ನು ಭವ್ಯವಾಗಿ ಮರು ನಿರ್ಮಿಸಿದ್ದಾರೆ. ಶ್ರೀಕಷ್ಣನು ಬಾಲ್ಯ ಕಳೆದ ಮಥುರಾ ಕ್ಷೇತ್ರವನ್ನು ಸಮಗ್ರ ಅಭಿವದ್ಧಿ ಪಡಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಹಾಗೆಯೇ ದ್ವಾರಕಾ ಕ್ಷೇತ್ರದ ಕಡೆಗೂ ಗಮನಹರಿಸಿದೆ ಎಂದರು.
ಒಂದೇ ವೇದಿಕೆಯಲ್ಲಿ ಸಚಿವ, ಸಂಸದ, ಶಾಸಕ
ಲೋಕಸಭಾ ಚುನಾವಣಾ ಲಿತಾಂಶದ ಬಳಿಕ ಇದೇ ಮೊದಲ ಬಾರಿಗೆ ಸಂಸದರು, ಉಸ್ತುವಾರಿ ಸಚಿವರು ಮತ್ತು ಶಾಸಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಅವರ ಬೆಂಬಲಿಗ ನಾಯಕರನ್ನು ಕೂರಿಸದೇ ಕಾರ್ಯಕ್ರಮದ ಶಿಷ್ಟಾಚಾರ ಪಾಲಿಸಿದ್ದು ವಿಶೇಷವಾಗಿತ್ತು. ಇನ್ನೂ ಡಾ ಕೆ.ಸುಧಾಕರ್ ಮತ್ತು ಡಾ. ಎಂ.ಸಿ.ಸುಧಾಕರ್ ಪರಸ್ಪರ ಕೈಕುಲುಕಿಕೊಂಡು ಜತೆಯಾಗಿ ಕಾರ್ಯಕ್ರಮ ಉದ್ಘಾಟಿಸಿದರು. ಆದರೆ, ಶಾಸಕರು ಮತ್ತು ಸಂಸದರು ಮಾತನಾಡಲಿಲ್ಲ. ಒಬ್ಬರನ್ನೊಬ್ಬರ ಮುಖವನ್ನೂ ನೋಡಕೊಳ್ಳಲಿಲ್ಲ. ಪ್ರದೀಪ್ ಈಶ್ವರ್ ಮಾತನಾಡುವ ವೇಳೆ ಸಂಸದರು ವೇದಿಕೆಯಿಂದ ಹೊರಟರು.
ಅಧ್ಯಕ್ಷತೆ ವಹಿಸಿ ವಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಯಾದವ ಸಮುದಾಯಕ್ಕೆ ಅಗತ್ಯ ಸೌಕರ್ಯ ಮತ್ತು ಕೃಷ್ಣ ಭವನ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದರು.
ಪೆರೇಸಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಪಿ.ಎನ್. ನರಸಿಂಹರೆಡ್ಡಿ ಕೃಷ್ಣನ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ನಗರಾಭಿವದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಯಾದವ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ.ಎಂ.ಮುನೇಗೌಡ, ನಿರ್ದೇಶಕ ಎಂ.ದೇವಿಶೆಟ್ಟಹಳ್ಳಿ ಗಂಗಾಧರ, ಜಿಲ್ಲಾಧ್ಯಕ್ಷ ಆರ್. ವೆಂಕಟೇಶ್, ತಾಲೂಕು ಅಧ್ಯಕ್ಷ ಮುನಿಕಷ್ಣ, ಮುಖಂಡರಾದ ಕೆ.ವಿ.ನಾಗರಾಜ್, ಮುತ್ತರಾಯಪ್ಪ, ಮುನಿರಾಜು ಮತ್ತಿತರರು ಇದ್ದರು.
ಅದ್ದೂರಿ ಮೆರವಣಿಗೆ, ಸನ್ಮಾನ
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇತ್ತೀಚೆಗೆ ಶ್ರೀಲಂಕಾದಲ್ಲಿ ಕೈಗೊಂಡಿದ್ದ ಏಷಿಯನ್ ಚಾಂಪಿಯನ್‌ಶಿಪ್ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶಿಕ್ಷಕ ಪ್ರಭಾಕರ ಅವರನ್ನು ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಶ್ರೀ ಕೃಷ್ಣನ ಹೂವಿನ ಪಲ್ಲಕ್ಕಿಯ ಮೆರವಣಿಗೆ ನಡೆಯಿತು. ಚಿಕ್ಕಬಳ್ಳಾಪುರದ ಶ್ರೀ ವೇಣುಗೊಪಾಲ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಜಾನಪದ, ತಮಟೆ ವಾದ್ಯ, ಸೋಮನ ಕುಣಿತಗಳು ಮೆರವಣಿಗೆಗೆ ಮೆರುಗು ತಂದವು.