ಮಾನವೀಯ ಗುಣ ಮೈಗೂಡಿಸಿಕೊಳ್ಳಿ

ಮಾನವೀಯ ಗುಣ ಮೈಗೂಡಿಸಿಕೊಳ್ಳಿ
Published on

ಹಾಸನ: ವಿದ್ಯಾರ್ಥಿಗಳು ಪಠ್ಯದ ಹೊರತಾಗಿ ಮಾನವೀಯ ಗುಣ ಹಾಗೂ ಜೀವನ ಕೌಶಲ ಮೈಗೂಡಿಸಿಕೊಂಡರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ. ಮಂಜುನಾಥ ಅಭಿಪ್ರಾಯಪಟ್ಟರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬೆಸ್ಟ್ ಪದವಿಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಡೆದ ಪದವಿ ಪ್ರದಾನ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಇಂದು ಸದಾ ಒತ್ತಡದಲ್ಲಿ ಬದುಕುತ್ತಿದ್ದಾನೆ. ಈ ಒತ್ತಡದಿಂದ ಅನೇಕ ರೋಗಗಳಿಗೂ ತುತ್ತಾಗುತ್ತಿದ್ದಾನೆ. ಜೀವನದಲ್ಲಿ ತಾಳ್ಮೆಯಿಂದ ಇದ್ದರೆ ಒತ್ತಡವನ್ನು ನಿವಾರಿಸಬಹುದಾಗಿದೆ. ಇಂದಿನ ದಿನಗಳಲ್ಲಿ ಪ್ರಾಮಾಣಿಕ ಅಧಿಕಾರಿಗಳೇ ಇಲ್ಲದಂತಾಗಿದ್ದು, ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ದಕ್ಷವಾಗಿ ಆಡಳಿತ ನಡೆಸುತ್ತಿದ್ದಾರೆ. ಇಂತಹ ದಕ್ಷ ಅಧಿಕಾರಿಗಳ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು, ಅವರಂತೆ ಇಂದಿನ ಯುವಕರು ಸರ್ಕಾರಿ ಹುದ್ದೆಗಳನ್ನು ಪಡೆದು ದಕ್ಷವಾಗಿ ಆಡಳಿತ ನಡೆಸಬೇಕು. ವೃತ್ತಿ ಅವಕಾಶಗಳು ಇರುವ ವಿಷಯಗಳನ್ನು ಯುವಕರು ಆಯ್ಕೆ ಮಾಡಿ ಅಧ್ಯಯನ ಮಾಡಿದರೆ ವಿದ್ಯಾಭ್ಯಾಸ ಮುಗಿಸಿದ ಕೂಡಲೇ ವೃತ್ತಿ ಅವಕಾಶಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.

ಸಾಧನೆಗೆ ಆರ್ಥಿಕತೆಯೇ ಮಾನದಂಡವಾಗಬಾರದು, ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡಬಹುದು. ನಮ್ಮೊಳಗಿನ ಕ್ರಿಯಾಶೀಲತೆಯನ್ನು ಒಂದಿಷ್ಟು ಬಳಸಿಕೊಂಡರೆ ನಾವು ಮಾಡುವ ಕೆಲಸದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ನವ ಮಾಧ್ಯಮಗಳಿಗೆ ಹೆಚ್ಚು ಅಂಟಿಕೊಳ್ಳಬಾರದು ಜೀವನದಲ್ಲಿ ಒಂದು ಭಾಗವಾಗಬೇಕು. ಹಾಗೆಂದು ದಿನ ನಿತ್ಯ ಓದುವುದೊಂದೆ ಕಾಯಕವಾಗಬಾರದು, ಕ್ರೀಡೆ, ಸಾಂಸ್ಕೃತಿಕ ಸೇರಿದಂತೆ ಇನ್ನಿತರ ಎಲ್ಲ ವಿಷಯಗಳಲ್ಲಿ ಮಹಿಳೆ ಸಾಧನೆ ಮಾಡಬೇಕು. ಇಂದು ಯುವಕರಿಗೆ ಮನೆಯಲ್ಲಿ ಪಾಲಕರು ಎಲ್ಲವನ್ನೂ ಒದಗಿಸಿದರೂ ಓದಲು ಸಾಧ್ಯವಾಗುತ್ತಿಲ್ಲ. ಓದುವ ವಯಸ್ಸಿನಲ್ಲಿ ಸಮಯವನ್ನು ವ್ಯರ್ಥ ಮಾಡಿ ದುಡಿಯುವ ಕಾಲದಲ್ಲಿ ಕಷ್ಟ ಪಡುವ ದುಸ್ಥಿತಿಗೆ ಬಂದಿದ್ದಾರೆ. ಸಮಾಜದಲ್ಲಿ ಇಂದು ಅನೇಕ ಸವಾಲುಗಳನ್ನು ಎದುರಿಸಲಾಗದೆ ಯುವಕರು ಅಡ್ಡ ದಾರಿಯನ್ನು ಹಿಡಿಯುವ ಸ್ಥಿತಿಗೆ ಯುವಕರು ಸಾಗುವಂತಾಗಿದೆ ಎಂದು ಹೇಳಿದರು.

ಹಾಸನಾಂಬ ರೂರಲ್ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಪಿ.ಎಸ್.ಮಂಜೇಗೌಡ ಮಾತನಾಡಿ, ಶಿಕ್ಷಣವೆಂದರೆ ಇಂದು ಕೇವಲ ಪಠ್ಯದಲ್ಲಿರುವುದನ್ನು ಕಲಿಯುವುದು ಹಾಗೂ ಅದಕ್ಕೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು ಎದುರಿಸುವುದು ಅಷ್ಟೆ ಎಂಬುದಾಗಿದೆ. ನಮ್ಮ ಹಿಂದಿನ ಮೌಲ್ಯಯುತವಾದ ಶಿಕ್ಷಣದ ಬಗ್ಗೆ ಇಂದು ಶಿಕ್ಷಕರಾಗಲಿ, ಪಾಲಕರಾಗಲಿ ಒತ್ತು ನೀಡುತ್ತಿಲ್ಲ. ಸಂಸ್ಕಾರಯುತವಾದ ಶಿಕ್ಷಣ ಇಂದು ಅವಶ್ಯಕವಾಗಿದ್ದು, ಇದನ್ನು ನೀಡುವ ಕೆಲಸ ಎಲ್ಲರಿಂದ ಆಗಬೇಕು. ಎಲ್ಲರನ್ನೂ ಪ್ರೀತಿಯಿಂದ ಕಾಣುವ, ಸಹಾಯ ಮನೋಭಾವದ ಗುಣ, ಸಮಾಜವನ್ನು ಸರಿದಾರಿಯಲ್ಲಿ ತೆಗೆದುಕೊಂಡು ಹೋಗುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ಹಾಗೂ ಬಿಬಿಎ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು. ಕಾಲೇಜಿನ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಹಾಸನಾಂಬ ರೂರಲ್ ಎಜುಕೇಷನ್ ಟ್ರಸ್ಟ್‌ನ ಖಜಾಂಚಿ ವೈ.ಎಚ್.ಈಶ್ವರಪ್ಪ, ಆಡಳಿತಾಧಿಕಾರಿ ಡಾ.ವಿಕ್ರಮ್, ಡಾ.ಎಂ.ಡಿ. ನಿತ್ಯಾನಂದ, ಬೆಸ್ಟ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಸಿ.ನವೀನ್, ಪಿ.ಯು.ಕಾಲೇಜಿನ ಪ್ರಾಂಶುಪಾಲ ಮಧು, ಕಾರ್ಯಕ್ರಮ ಸಂಯೋಜನಾಧಿಕಾರಿ ಬಿ.ಎಸ್.ಅತೀತ್, ಸಚ್ಚಿನ್, ಮಹೇಶ್, ಪುನೀತ್, ಅರ್ಚನಾ, ಚೇತನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net