ಅಸಮಾನತೆ ತೊಡೆದು ಹಾಕಿದ ನಾಲ್ವಡಿ:ಸಚಿವ ಎಚ್​.ಸಿ.ಮಹದೇವಪ್ಪ ಹೇಳಿಕೆ

mahadevappa
Published on

ಬೆಂಗಳೂರು: ಮೈಸೂರು ಸಂಸ್ಥಾನದಲ್ಲಿ ಅಸಮಾನತೆಯನ್ನು ತೊಡೆದುಹಾಕಿ ಸಮಸಮಾಜ ನಿರ್ಮಾಣ ಮಾಡಿದವರು ನಾಲ್ವಡಿ ಕೃಷ್ಣರಾಜ ಒಡೆಯರು ಎಂದು ಸಚಿವ ಎಚ್​.ಸಿ.ಮಹದೇವಪ್ಪ ಹೇಳಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರಿ ಕಲಾ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಹಿರಿಯ ಇತಿಹಾಸಕಾರ ಪೊ.ಎಸ್​.ಚಂದ್ರಶೇಖರ್​ ರಚಿಸಿದ "ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

3 ಇದ್ದ ಪಂಚಮ ಶಾಲೆಗಳ ಸಂಖ್ಯೆಯನ್ನು 65ಕ್ಕೆ ಹೆಚ್ಚಿಸಿದವರು ನಾಲ್ವಡಿ. ಮಹಿಳೆಯರು ಮತ್ತು ಅಸ್ಪೃಶ್ಯರ ಸುಧಾರಣೆಗೆ ಶ್ರಮಿಸಿದವರು.ರಾಜಕೀಯ ವಿಚಾರಗಳೇ ಪ್ರಬಲ ಚರಿತ್ರೆ ಎಂದು ತಿಳಿದುಕೊಂಡಿರುವ ಸಂದರ್ಭದಲ್ಲಿ ನಾಲ್ವಡಿ, ಸಾಮಾಜಿಕ ಒಳಗೊಳ್ಳುವಿಕೆ ಬಗ್ಗೆ ಬೆಳಕು ಚೆಲ್ಲುವ, ದಾಖಲಿಸುವ ಕೆಲಸ ಈ ಕೃತಿಯಲ್ಲಿ ಆಗಿದೆ.ಇಂತಹ ಶ್ರೇಷ್ಠ ಕೃತಿಯನ್ನು ಕೊಟ್ಟ ಪೊ. ಚಂದ್ರಶೇಖರ್​ ಅಭಿನಂದನಾರ್ಹರು. ಈ ಪುಸ್ತಕ ಮುಂದಿನ ದಿನದಲ್ಲಿ ಪ್ರಮುಖ ಪಠ್ಯಪುಸ್ತಕವಾಗಿ ಹೊರಬರಬೇಕು. ಈ ಬಗ್ಗೆ ಸಿಎಂ ಗಮನಕ್ಕೆ ತರುತ್ತೇನೆ.ರಾಜ್ಯವನ್ನು ಆಧುನೀಕರಿಸಲು ಕೃತಿ ಪ್ರೇರಣೆಯಾಗಲೆಂದು ಸಚಿವರು ಆಶಿಸಿದರು.

ಪೊ.ಕೆ.ವೈ.ನಾರಾಯಣಸ್ವಾಮಿ ಮಾತನಾಡಿ, ಈ ಕೃತಿಯು ನಾಲ್ವಡಿ ಕೃಷ್ಣರಾಜ ಒಡೆಯರನ್ನು ಕೇಂದ್ರವಾಗಿರಿಸಿಕೊಂಡು ಮೈಸೂರಿನ 150 ವರ್ಷಗಳ ಇತಿಹಾಸವನ್ನು ಕಟ್ಟಿಕೊಟ್ಟಿದೆ. ನಾಲ್ವಡಿ ರಾಜರಾಗಿದ್ದರೂ ಅಗ್ನಿಕುಂಡದಲ್ಲಿ ಹಾಯ್ದು ಬಂದ ಬಗ್ಗೆ ವಸ್ತುನಿಷ್ಠವಾಗಿ ಪುಸ್ತಕದಲ್ಲಿ ವಿವರಿಸಲಾಗಿದೆ ಎಂದು ವಿಶ್ಲೇಷಿಸಿದರು. ಪರಿಷತ್ತು ಅಧ್ಯ ಎಂ.ಪ್ರಕಾಶಮೂರ್ತಿ ಮತ್ತಿತರರಿದ್ದರು.

ನಾಲ್ವಡಿ ಕೃಷ್ಣರಾಜ ಒಡೆಯರು ಆಧುನಿಕ ಮೈಸೂರನ್ನು ರೂಪಿಸುವ ಕಾರ್ಯದೊಂದಿಗೆ ಸಾಮಾಜಿಕ ಒಳಗೊಳ್ಳುವಿಕೆ ಕುರಿತು ಮೊದಲು ಆಲೋಚಿಸಿದರು. ಬಸವಿ ಪದ್ಧತಿ ಮತ್ತು ವೇಶ್ಯಾವಾಟಿಕೆ ನಿಷೇಧಿಸಿದ್ದರು. ಸಮಾಜ ಸುಧಾರಣೆಗೆ ಒತ್ತು ಕೊಟ್ಟಿದ್ದರು.

| ಪ್ರೊ.ಎಸ್​.ಚಂದ್ರಶೇಖರ್​, ಲೇಖಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net