ಧರ್ಮ,ರಾಜಕೀಯದಿಂದ ಅಧೀನ ಮನಸ್ಥಿತಿಗೆ ತಳ್ಳುವ ಪ್ರಯತ್ನ:ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿಕೆ

narahalli
Published on

ಬೆಂಗಳೂರು:ಪ್ರಸ್ತುತ ಕಾಲಟ್ಟದಲ್ಲಿ ಧರ್ಮ ಮತ್ತು ರಾಜಕೀಯದಿಂದ ನಮ್ಮನ್ನು ಅಧೀನ ಮನಸ್ಥಿತಿಗೆ ತಳ್ಳುವ ಪ್ರಯತ್ನ ನಡೆದಿವೆ ಎಂದು ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದ್ದಾರೆ.

ಅಜೀಂ ಪ್ರೇಮ್​ಜಿ ವಿಶ್ವವಿದ್ಯಾಲಯ ಮತ್ತು ಅಹರ್ನಿಶಿ ಪ್ರಕಾಶನ ಸಹಯೋಗದಲ್ಲಿ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ "ಸಾಹಿತ್ಯ ಸಹವಾಸ' ಭಾಷೆ-ಸಾಹಿತ್ಯ- ವ್ಯಕ್ತಿ-ಚಳವಳಿ ಯು.ಆರ್​. ಅನಂತಮೂರ್ತಿ ಮಾತುಕತೆ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.

ಯು.ಆರ್​.ಅನಂತಮೂರ್ತಿ, ಜನಪ್ರಿಯತೆ ಮತ್ತು ಸಮೂಹ ಸನ್ನೆಗಳನ್ನು ಪ್ರಬಲವಾಗಿ ವಿರೋಧಿಸಿದ್ದರು. ಆದರೆ, ಇಂದಿನ ಲೇಖಕರು, ಸಮಾಜ ಈ ಎರಡು ಸಂಗತಿಗಳಿಗೆ ಒಳಗಾಗಿವೆ. ಇವರೆಡು ಸಂಗತಿಗಳು ಸರ್ವಾಧಿಕಾರಿ ಧೋರಣೆ ತಾಳಿ, ಇಡೀ ಸಮುದಾಯವನ್ನು ಸಮೂಹ ಸನ್ನೆಗೆ ಒಳಪಡಿಸುತ್ತಿವೆ. ಇಂದಿನ ಸಮಾಜ ಸ್ವಾಯತ್ತತೆ ಮತ್ತು ಸ್ವಂತ ಆಲೋಚನೆ ಕಳೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕರಿಂದು ತಮ್ಮ ಪ್ರಜ್ಞೆ ಸ್ವತಂತ್ರವಾಗಿಟ್ಟುಕೊಳ್ಳುವುದು ದೊಡ್ಡ ಸಮಸ್ಯೆಯಾಗಿದೆ. ನಾವೆಲ್ಲ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಧೀನ ಮನಸ್ಥಿತಿಗೆ ಒಳಗಾಗಿದ್ದೇವೆ. ಇಂತಹ ಮನಸ್ಥಿತಿ ಹೊಂದಿದ ಯಾವುದೇ ಶ್ರೇಷ್ಠ ಲೇಖಕರು ಮಹತ್ವದ್ದನ್ನು ಸಾಧಿಸಲು ಸಾಧ್ಯವಿಲ್ಲ ಎಂದರು.

ಕುವೆಂಪು ವಿವಿ ಕುಲಪತಿ ಡಾ.ಶರತ್​ ಅನಂತಮೂರ್ತಿ ಮಾತನಾಡಿ, ಯು.ಆರ್​. ಅನಂತಮೂರ್ತಿ ಅವರು ಡೈನಮಿಕ್​ ಯೋಚನಾ ಪ್ರವೃತ್ತಿ ಹೊಂದಿದ್ದರು. ಅವರ ಆಲೋಚನೆ, ವಿಚಾರ ಶಕ್ತಿ, ಮಾತಿನ ವಿಸ್ತಾರವನ್ನು ಹಿಡಿದಿಟ್ಟುಕೊಳ್ಳುವ ಶೈಲಿ ಅದ್ಭುತವಾಗಿತ್ತು ಎಂದು ತಂದೆಯೊಂದಿಗೆ ಕಳೆದ ಆ ದಿನಗಳನ್ನು ಸ್ಮರಿಸಿದರು.

ಅಜೀಂ ಪ್ರೇಮ್​ಜಿ ವಿವಿಯ ಸಹ ನಿರ್ದೇಶಕ ಎಸ್​.ವಿ. ಮಂಜುನಾಥ್​, ಪ್ರಾಧ್ಯಾಪಕ ಡಾ. ಚಂದನ್​ಗೌಡ, ವಿವೇಕ್​ ಶಾನಭಾಗ್​, ಅಜೀಂ ಪ್ರೇಮ್​ಜಿ ಫೌಂಡೇಷನ್​​​​​​ ಮುಖ್ಯ ಸಂವಹನಾಧಿಕಾರಿ ಸುದೇಶ್​ ವೆಂಕಟೇಶ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net