

ಗುಂಡ್ಲುಪೇಟೆ: ಪಟ್ಟಣದ ಪುರಸಭಾ ವ್ಯಾಪ್ತಿಯ ನಿವೇಶನಗಳ ಬಿ-ಖಾತೆ ಅಭಿಯಾನದಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಲು ದ.ರಾ.ಬೇಂದ್ರೆ ನಗರ (ಅಶ್ವಿನಿ ಬಡಾವಣೆ) ನಿವಾಸಿಗಳು ಪುರಸಭೆ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳನ್ನು ಒತ್ತಾಯಿಸಿದರು.
ಸರ್ಕಾರ ಪುರಸಭೆ ವ್ಯಾಪ್ತಿಯ ನಿವೇಶನಗಳನ್ನು ಬಿ.ಖಾತೆ ಮಾಡಿಕೊಳ್ಳುವ ಸಂಬಂಧ ಅಧಿಸೂಚನೆ ಹೊರಡಿಸಿ ಮೂರು ತಿಂಗಳ ಕಾಲಾವಕಾಶ ನೀಡಿದೆ. ಆದರೆ ಗೆಜೆಟ್ ನೋಟಿಫಿಕೇಷನ್‌ನಲ್ಲಿ ನೀಡಿರುವ ಸೂಚನೆಯನ್ನು ಪಾಲಿಸದೆ ಅಧಿಕಾರಿಗಳು ದುಪ್ಪಟ್ಟು ತೆರಿಗೆ ವಸೂಲಿಗೆ ಮುಂದಾಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಸದಸ್ಯರು ಒಂದು ರೀತಿ ಹೇಳಿದರೆ ಅಧಿಕಾರಿಗಳೇ ಬೇರೆ ರೀತಿ ಹೇಳುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ನೀಡಿದ್ದ ಗಡುವಿನಲ್ಲಿ ಸದ್ಯ ಎರಡೂವರೆ ತಿಂಗಳು ಮುಗಿದರೂ ಹೆಚ್ಚಿನ ಫಲಾನುಭವಿಗಳು ಅರ್ಜಿ ಸಲ್ಲಿಸಲು ಮುಂದಾಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಪುರಸಭೆ ಸದಸ್ಯರಾದ ನಾಗೇಶ್ ಮತ್ತು ಪಟ್ಟಾಭಿ ನೇತೃತ್ವದಲ್ಲಿ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಜಿ.ಎಸ್.ಮಧುಸೂದನ್ ಮತ್ತು ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರ್ ಅವರನ್ನು ಭೇಟಿ ಮಾಡಿದರು. ಈಗಾಗಲೇ ಸರ್ಕಾರಿ ಸುತ್ತೋಲೆ ಅನ್ವಯ ಅಕ್ರಮ ಸಕ್ರಮ ಅಡಿಯಲ್ಲಿ ಬಿ-ಖಾತೆ ನೀಡಲು ಸರ್ಕಾರ ಮುಂದಾಗಿದ್ದು ಪ್ರಸಕ್ತ ಸಾಲಿಗೆ ಮಾತ್ರ ಕಂದಾಯವನ್ನು ದುಪ್ಪಟ್ಟು ಪಡೆದು ಬಿ-ಖಾತೆ ಮಾಡಿಕೊಡಲು ಸರ್ಕಾರ ಆದೇಶ ನೀಡಿದೆ. ಆದರೆ ಪುರಸಭಾ ಸಿಬ್ಬಂದಿ ಕಳೆದ ಆರು ವರ್ಷಗಳ ತೆರಿಗೆಯನ್ನು ಪಾವತಿಸಬೇಕು ಎಂದು ಚಲನ್ ನೀಡುತ್ತಿದ್ದಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಪುರಸಭಾ ಅಧ್ಯಕ್ಷ ಜಿ.ಎಸ್.ಮಧುಸೂದನ್ ಮತ್ತು ಮುಖ್ಯ ಅಧಿಕಾರಿ ವಸಂತಕುಮಾರಿ, ಈ ಬಗ್ಗೆ ಮಂಗಳವಾರ ನಡೆಯಲಿರುವ ಪುರಸಭಾ ಸದಸ್ಯರ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.