ಎಲಿಫೆಂಟ್ ಟಾಸ್ಕ್‌ಫೋರ್ಸ್ ಅವಶ್ಯ

IMG_20240805_173519711
Published on

ಗುಂಡ್ಲುಪೇಟೆ: ಬಂಡೀಪುರದಂತಹ ಪ್ರಕೃತಿ ಸಂಪತ್ತು ನಮ್ಮಲ್ಲಿರುವುದೆ ಹೆಮ್ಮೆಯ ಸಂಗತಿ ಎಂದು ಶಾಸಕ ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಎಚ್.ಎಂ.ಗಣೇಶಪ್ರಸಾದ್ ಹೇಳಿದರು.


ಅರಣ್ಯ ಇಲಾಖೆಯಿಂದ ಸೋಮವಾರ ಬಂಡೀಪುರದ ಮೇಲುಕಾಮನಹಳ್ಳಿಯ ಸಫಾರಿ ಟಿಕೆಟ್ ಕೌಂಟರ್ ಬಳಿ ಆಯೋಜಿಸಿದ್ದ ವಿಶ್ವ ಹುಲಿ ಮತ್ತು ವಿಶ್ವ ಆನೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಹುಲಿ ಮತ್ತು ಆನೆಗಳನ್ನು ಹೊಂದಿರುವ ಬಂಡೀಪುರ ರಾಷ್ಟ್ರದ ಮಟ್ಟದಲ್ಲಿ ಪ್ರಖ್ಯಾತವಾಗಿದೆ. ನಾನಾ ಕಾರಣದಿಂದಾಗಿ ಇತ್ತೀಚೆಗೆ ಅರಣ್ಯ ಕ್ಷೀಣಿಸುತ್ತಿರುವ ಪರಿಣಾಮ ವನ್ಯಜೀವಿಗಳು ಗ್ರಾಮಗಳತ್ತ ಮುಖ ಮಾಡುತ್ತಿವೆ. ಇದರಿಂದ ಕಾಡಿನ ಪ್ರದೇಶದಲ್ಲಿ ಜನರು ವಿವಿಧ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಎಲ್ಲರೂ ಕಾಡು ಉಳಿಸಬೇಕು ಎಂದರು.


ವಾರಾಂತ್ಯ ದಿನಗಳಲ್ಲಿ ಹೆಚ್ಚು ಜನರು ಸಫಾರಿಗೆ ಆಗಮಿಸುತ್ತಾರೆ. ಇದರಿಂದ ಕಾಡಿನ ಮೇಲೆ ಹೆಚ್ಚು ಒತ್ತಡ ಬೀಳುತ್ತಿದ್ದು ಇದನ್ನು ನಿಯಂತ್ರಣ ಮಾಡಬೇಕಾಗಿದೆ. ತಾಲೂಕಿನಲ್ಲಿ ಆನೆ-ಮಾನವ ಸಂಘರ್ಷ ತಪ್ಪಿಸಲು ಎಲಿಫೆಂಟ್ ಟಾಸ್ಕ್‌ಫೋರ್ಸ್ ಅವಶ್ಯಕವಾಗಿತ್ತು. ಮಂಚಹಳ್ಳಿ, ಯಡವನಹಳ್ಳಿ, ಬರಗಿ, ಹೊಂಗಹಳ್ಳಿ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಿದ್ದು ಇದನ್ನು ತಡೆಗಟ್ಟಲು ಅನುಕೂಲವಾಗಲಿದೆ ಎಂದು ಹೇಳಿದರು.


ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುರೇಶ್, ಸತೀಶ್, ಪರಮೇಶ್, ರವೀಂದ್ರ, ಆರ್‌ಎಫ್‌ಒಗಳು, ಅರಣ್ಯ ಇಲಾಖೆ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಇದೇ ಸಂದರ್ಭದಲ್ಲಿ ಬೆಂಕಿ ನಿರ್ವಹಣೆ, ಆನೆ ರಕ್ಷಣೆ ಹಾಗೂ ಹುಲಿ ಸೆರೆ ಕಾರ್ಯಾಚರಣೆಗಳಲ್ಲಿ ಉತ್ತಮ ಸಾಧನೆ ಮಾಡಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net