ಕಾವೇರಿ ವನ್ಯಜೀವಿಧಾಮ ಸೇರಿದ ಗಜಪಡೆ

drone
Published on

* ಡ್ರೋನ್ ನೆರವಿನೊಂದಿಗೆ ಅರಣ್ಯ ಇಲಾಖೆ ಕೈಗೊಂಡ ಕಾರ್ಯಾಚರಣೆ ಸಲ

* ಜನರಲ್ಲಿ ಭಯ ಹುಟ್ಟಿಸಿ, ಬೆಳೆ ಹಾಳು ಮಾಡುತ್ತಿದ್ದ ಆನೆಗಳು

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಜನವಸತಿ ಪ್ರದೇಶಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದ ಸುಮಾರು 9 ಕಾಡಾನೆಗಳನ್ನು ಕಾವೇರಿ ವನ್ಯಜೀವಿಧಾಮ ಸೇರಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಜಿಲ್ಲೆಯ ಕಬ್ಬಾಳು, ಹಂದಿಗೊಂದಿ, ಚಿಕ್ಕಮಣ್ಣುಗುಡ್ಡೆ, ನರೀಕಲ್ಲುಗುಡ್ಡ ಅರಣ್ಯ ಪ್ರದೇಶದಲ್ಲಿ ಕಾವೇರಿ ವನ್ಯಜೀವಿಧಾಮದಿಂದ ಬಂದ 28ಕ್ಕೂ ಹೆಚ್ಚು ಆನೆಗಳು ಅರಣ್ಯ ಪ್ರದೇಶಗಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಾ ರೈತರಿಗೆ, ಅರಣ್ಯ ಇಲಾಖೆಗೆ ಸ್ವಪ್ನದ ರೀತಿ ಕಾಡುತ್ತಿದ್ದವು. ರೈತರ ಫಸಲು ಹಾನಿ ಮಾಡುವ ಜತೆಗೆ ಗ್ರಾಮದ ಸನಿಹಕ್ಕೆ ಬರುವುದು ರಸ್ತೆಗಳಲ್ಲಿ ಕಾಣಿಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸಿದ್ದವು.

ಈ ಹಿನ್ನೆಲೆಯಲ್ಲಿ ಹೊಸ ಉಪಾಯದಲ್ಲಿ ಆನೆಗಳನ್ನು ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಹೆಚ್ಚು ಸಿಬ್ಬಂದಿ ಮತ್ತು ಡ್ರೋನ್ ಸಹಾಯದ ಮೂಲಕ 28 ಆನೆಗಳ ಪೈಕಿ 9 ಆನೆಗಳನ್ನು ಕಬ್ಬಾಳು ಅರಣ್ಯದಿಂದ ಕಾವೇರಿ ವನ್ಯಜೀವಿಧಾಮಕ್ಕೆ ಒಂದೇ ರಾತ್ರಿಯಲ್ಲಿ ಬೃಹತ್ ಕಾರ್ಯಾಚರಣೆ ನಡೆಸುವ ಮೂಲಕ ಅಟ್ಟಲಾಗಿದೆ.

ಡ್ರೋನ್ ಕ್ಯಾಮರಾ ಕಣ್ಣು

ನರೀಕಲ್ಲುಗುಡ್ಡ 3, ಚಿಕ್ಕಮಣ್ಣುಗುಡ್ಡೆ 2, ಹಂದಿಗೊಂದಿ 2, ತೆಂಗಿನಕಲ್ಲು ಅರಣ್ಯದಲ್ಲಿದ್ದ 2 ಆನೆಗಳನ್ನು ಆನೆ ಕಾರ್ಯಪಡೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ತಂಡ ರಚನೆ ಮಾಡಿಕೊಂಡು ಭಾನುವಾರ ಮತ್ತು ಶನಿವಾರ ಸತತವಾಗಿ ಕಾರ್ಯಾಚರಣೆ ನಡೆಸಿ ಕಬ್ಬಾಳು ಅರಣ್ಯಕ್ಕೆ ಸೇರಿಸಿದ್ದರು. ಬಳಿಕ ಕಬ್ಬಾಳು ಅರಣ್ಯದಲ್ಲಿ ಡ್ರೋನ್ ಕ್ಯಾಮರಾ ಬಳಸಿ 80ಕ್ಕೂ ಹೆಚ್ಚು ಸಿಬ್ಬಂದಿ, ವಲಯ ಅರಣ್ಯಾಧಿಕಾರಿಗಳು ಡಿಎಫ್‌ಒ ಎಂ.ರಾಮಕೃಷ್ಣಪ್ಪ ನೇತೃತ್ವದಲ್ಲಿ ಸೋಮವಾರ ರಾತ್ರಿ ಸತತ 9 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಕಾವೇರಿ ವನ್ಯಜೀವಿಧಾಮಕ್ಕೆ ಆನೆಗಳನ್ನು ಅಟ್ಟುವಲ್ಲಿ ಯಶಸ್ವಿಯಾದರು. ಎಸಿಎಫ್ ಪುಟ್ಟಮ್ಮ, ಚನ್ನಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲೇಶ್, ರಾಮನಗರ ಮಹಮ್ಮದ್ ಮನ್ಸೂರ್, ಕನಕಪುರ ರವಿ, ಆನೆ ಕಾರ್ಯಪಡೆಯ ಮುತ್ತುಸ್ವಾಮಿ ನಾಯಕ್, ಮೋಕ್ಷಜ್ಞ, ದಿಲೀಪ್ ಸೇರಿ ಹಲವು ಅಧಿಕಾರಿಗಳು ಇದ್ದರು.

ರಸ್ತೆ ದಾಟದೆ ನಿಂತ ಆನೆಗಳು

ಕನಕಪುರ-ಮಳವಳ್ಳಿ ಹೆದ್ದಾರಿಯಲ್ಲಿ ಆನೆಗಳು ರಸ್ತೆ ದಾಟದೇ ಮತ್ತೆ ವಾಪಸಾಗಲು ಮುಂದಾದವು. ಅರಣ್ಯ ಸಿಬ್ಬಂದಿ ನಾಕಾಬಂದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಕಾರಣ ರಸ್ತೆಯಿಂದ 300 ಮೀಟರ್ ಅಂತರದಲ್ಲಿ ಬಂದು ನಿಂತವು. ಸುಮಾರು ಒಂದೂವರೆ ಗಂಟೆ ಅಲುಗಾಡಲಿಲ್ಲ. ಸಮಯ ಮೀರಿದರೆ ಆನೆಗಳು ರಸ್ತೆ ದಾಟುವುದಿಲ್ಲ ಎಂಬುದನ್ನು ಅರಿತ ಇಲಾಖೆ ಸಿಬ್ಬಂದಿ ಆನೆಗಳ ಗುಂಪನ್ನು ಚದುರಿಸಿ, ರಸ್ತೆ ದಾಟಿಸಿದರು. ಈ ವೇಳೆ ವಾಹನ ಸಂಚಾರ ಬಂದ್ ಮಾಡಲಾಗಿತ್ತು.

ಸಹಕಾರ ಕೊಟ್ಟ ಗ್ರಾಮಸ್ಥರು

ಸಾತನೂರು ಮತ್ತು ಕೆಮ್ಮಾಳೆ ಗ್ರಾಮದಲ್ಲಿ ಊರ ಹಬ್ಬ ನಡೆಯುತ್ತಿದ್ದ ಕಾರಣ ಆನೆಗಳು ಗ್ರಾಮದಲ್ಲಿ ಮೈಕ್ ಶಬ್ದ ಮತ್ತು ವಿದ್ಯುತ್ ದೀಪಗಳ ಅಲಂಕಾರ ಕಂಡು ಮುಂದೆ ಹೋಗಲು ಹಿಂಜರಿದವು. ಕೂಡಲೇ ಗ್ರಾಮಸ್ಥರು ಮೈಕ್ ಮತ್ತು ತಮಟೆ ಶಬ್ದ ನಿಲ್ಲಿಸಿ, ವಿದ್ಯುತ್‌ದೀಪ ಬಂದ್ ಮಾಡಿ ಸಹಕಾರ ನೀಡಿದರು.

ಡ್ರೋನ್ ನೆರವು

ರಾತ್ರಿ ವೇಳೆ ಸಿಬ್ಬಂದಿ ಸುಲಭವಾಗಿ ಆನೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಮಾಡಲು ಕಷ್ಟ ಎಂಬುದನ್ನು ಅರಿತಿದ್ದ ಅರಣ್ಯ ಇಲಾಖೆ ಈ ಬಾರಿ ಡ್ರೋನ್ ತಂತ್ರಜ್ಞಾನ ಉಪಯೋಗಿಸಿಕೊಂಡಿತು. ಆನೆಗಳು ಹೋಗುವ ದಾರಿಯನ್ನು ಸೂಕ್ಷ್ಮವಾಗಿ ಗಮನಿಸಲು ಹಾಗೂ ನಿಗದಿತ ಪಥದಲ್ಲೇ ಸಾಗಲು ಡ್ರೋನ್ ನೆರವಾಯಿತು.

ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಆನೆಗಳ ಉಪಟಳ ತಡೆಗೆ ಕ್ರಮ ಕೈಗೊಂಡು, ನಿರಂತರ ಕಾರ್ಯಾಚರಣೆ ಮೂಲಕ ಸ್ವಸ್ಥಾನ ಸೇರಿಸಲಾಗುತ್ತಿದೆ. ಆದರೆ, ಕಾವೇರಿ ವನ್ಯಜೀವಿಧಾಮದಿಂದ ಆನೆಗಳು ಜಿಲ್ಲೆಯ ಅರಣ್ಯಕ್ಕೆ ಬರುವುದನ್ನು ತಡೆಯುವ ಕೆಲಸ ಮಾಡುತ್ತಿಲ್ಲ. ಇದರಿಂದ ಆನೆಗಳ ಉಪಟಳಕ್ಕೆ ಬ್ರೇಕ್ ಬೀಳುತ್ತಿಲ್ಲ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸ್ವಸ್ಥಾನದಲ್ಲೇ ಆನೆಗಳನ್ನು ತಡೆಗಟ್ಟುವ ಕೆಲಸ ಮಾಡಬೇಕಿದೆ.ಕೆ. ಧನರಾಜ್, ಗ್ರಾಪಂ ಸದಸ್ಯ, ಕವಣಾಪುರ ಆನೆಗಳ ಕಾರ್ಯಾಚರಣೆ ಇಲಾಖೆಗೆ ಸವಾಲಿನ ಕೆಲಸವಾಗಿತ್ತು. ಆನೆಗಳ ಚಲನವಲನ, ಹೋಗುತ್ತಿರುವ ಹಾದಿ ತಿಳಿಯಲು ಡ್ರೋನ್ ಕ್ಯಾಮರಾ ಜತೆಗೆ ಸಿಬ್ಬಂದಿ ಸಹಾಯ ಹೆಚ್ಚಾಗಿತ್ತು. ಕಾರ್ಯಾಚರಣೆಯಲ್ಲಿ ಇಲಾಖೆಯ ಅಧಿಕಾರಿಗಳ, ಸಿಬ್ಬಂದಿ ಪರಿಶ್ರಮವಿದ್ದ ಕಾರಣ ಆನೆಗಳನ್ನು ಸ್ವಸ್ಥಾನ ಸೇರಿಸಲು ಸುಲಭವಾಯಿತು. ಮತ್ತೆ 3-4 ದಿನಗಳಲ್ಲಿ ಇನ್ನುಳಿದ ಆನೆಗಳನ್ನು ಇದೇ ರೀತಿಯಲ್ಲಿ ಕಾರ್ಯಾಚರಣೆ ನಡೆಸಲು ಇಲಾಖೆ ಸನ್ನದ್ಧವಾಗಿದೆ.ಎಂ. ರಾಮಕೃಷ್ಣಪ್ಪಡಿಎಫ್‌ಒ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net